ಸಂಚಾರಕ್ಕೆ ಲಭ್ಯವಿಲ್ಲದ ಪಶು ಸಂಚಾರ ಆಂಬುಲೆನ್ಸ್!

pashu ambulacne
Published on

ರೂಟ್ ವಾಹನಗಳಲ್ಲೇ ಚಿಕಿತ್ಸಾ ಪ್ರಕ್ರಿಯೆಟೆಂಡರ್ ಪ್ರಕ್ರಿಯೆಗೆ ಆಮೆವೇಗ


ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಪಶುಗಳಿಗೆ ತುರ್ತು ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪಶು ಸಂಜೀವಿನಿ ಯೋಜನೆಯ ಸಂಚಾರ ವಾಹನಗಳು (ಆಂಬುಲೆನ್ಸ್)ಗಳು ಜಿಲ್ಲೆಯಲ್ಲಿ ಸಂಚಾರ ಆರಂಭಿಸುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.
ಕಳೆದ ಆರೇಳು ತಿಂಗಳ ಹಿಂದೆಯೇ ಜಿಲ್ಲೆಯ ನಾಲ್ಕೂ ತಾಲೂಕಿಗಳಿಗೆ ಸೇವೆ ಸಲ್ಲಿಸಲು ಖರೀದಿಸಿದ 5 ಆಂಬುಲೆನ್ಸ್‌ಗಳು ನಿಂತಲ್ಲೇ ನಿಂತಿದ್ದು ಪಶು ಚಿಕಿತ್ಸಾ ಸೇವೆಗೆ ಲಭ್ಯವಿಲ್ಲದಂತಾಗಿದೆ. ಕೆಲವೊಂದು ವಾಹನಗಳು ಪಶು ಚಿಕಿತ್ಸಾ ಕೇಂದ್ರಗಳಲ್ಲಿ ನಿಲುಗಡೆಯಾಗಿದ್ದರೆ ಉಳಿದವು ಆರ್‌ಟಿಒ ಕಚೇರಿ ಆವರಣದಲ್ಲಿ ಧೂಳು ಹಿಡಿಯುತ್ತಿವೆ. ರೈತರ ಮನೆ ಬಾಗಿಲಿಗೇ ತೆರಳಿ ಪಶುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕಿಸಿಕೊಡಬೇಕೆಂಬ ಯೋಜನೆಗೆ ಗ್ರಹಣ ಹಿಡಿದಿದ್ದು ಯೋಜನೆ ಟೇಕ್ಾ ಆಗುವ ಲಕ್ಷಣ ಕಂಡುಬರುತ್ತಿಲ್ಲ.
ರೂಟ್ ವಾಹನಗಳೇ ಗತಿ: ಈಗಾಗಲೇ ಜಿಲ್ಲಾ ಪಶು ಪಾಲನಾ ಇಲಾಖೆ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಜಿಲ್ಲೆಯಲ್ಲಿನ ಲಕ್ಷಾಂತರ ರಾಸುಗಳಿಗೆ ಚಿಕಿತ್ಸೆ ದೊರಕಿಸಿಕೊಡುವುದು ಸವಾಲಿನ ಕೆಲಸವಾಗಿದೆ. ಆದರೂ ತಾಲೂಕು ಮಟ್ಟದಲ್ಲಿ ಆಯಾ ವ್ಯಾಪ್ತಿಯಲ್ಲಿನ ಪಶುಗಳಿಗೆ ಚಿಕಿತ್ಸೆ ದೊರಕಿಸಿಕೊಡಲು ಈ ಹಿಂದಿನ ರೂಟ್ ವಾಹನಗಳನ್ನೇ ಬಳಕೆ ಮಾಡಲಾಗುತ್ತಿದೆ. ವಾರದಲ್ಲಿ ಒಂದೊಂದು ದಿನ ಒಂದೊಂದು ಮಾರ್ಗವಾಗಿ ಇಲಾಖೆಯ ವಾಹನಗಳಲ್ಲೇ ಸಂಚರಿಸುವ ಸಿಬ್ಬಂದಿ ಆಯಾ ಮಾರ್ಗದ ಹಳ್ಳಿಗಳಿಗೆ ತೆರಳಿ ಸ್ಥಳೀಯವಾಗಿ ಚಿಕಿತ್ಸೆ ದೊರಕಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಪಶು ಸಂಚಾರ ಆಂಬುಲೆನ್ಸ್ ಸಂಚಾರಕ್ಕೆ ಮುಕ್ತವಾದರೆ ಪಶುಪಾಲನಾ ಇಲಾಖೆ ಮೇಲಿನ ಒತ್ತಡ ತಗ್ಗಲಿದೆ. ಆದರೆ ಕಳೆದ ಆರೇಳು ತಿಂಗಳಿಂದ ತೆವಳುತ್ತಲೇ ಇರುವ ಪ್ರಕ್ರಿಯೆ ಚುರುಕುಗೊಳ್ಳುವ ಸಾಧ್ಯತೆ ಕಂಡುಬರುತ್ತಿಲ್ಲ. 1962 ಸಹಾಯವಾಣಿಗೆ ಕರೆ ಮಾಡಿದರೆ ಸಂಬಂಧಪಟ್ಟ ಪಶು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಅವರು ಇಲಾಖೆಯ ವಾಹನಗಳ ಮೂಲಕವೇ ಚಿಕಿತ್ಸೆ ದೊರಕಿಸಿಕೊಡುವ ಕಸರತ್ತು ನಡೆಸುತ್ತಿದ್ದಾರೆ.
ಟೆಂಡರ್ ಪ್ರಕ್ರಿಯೆಗೆ ಗ್ರಹಣ: ಈಗಾಗಲೇ ಹೊಸದಾಗಿ 5 ಪಶು ಆಂಬುಲೆನ್ಸ್‌ಗಳನ್ನು ಸರ್ಕಾರ ಖರೀದಿಸಿದ್ದು ಗ್ರಾಮಾಂತರ ಜಿಲ್ಲೆಗೆ ಹಸ್ತಾಂತರಿಸಿದೆ. ಆದರೆ ಇದರ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದರೂ ಅದೂ ಅಂತಿಮವಾಗಿಲ್ಲ ಎನ್ನಲಾಗಿದೆ. ಟೆಂಡರ್ ಪಡೆದವರು ಹೊರಗುತ್ತಿಗೆ ಮೇಲೆ ಪಶು ವೈದ್ಯರು, ಸಹಾಯಕರು ಸೇರಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ಜತೆಗೆ ಸಂಬಂಧಪಟ್ಟ ಔಷಧಿಗಳ ದಾಸ್ತಾನು ಮಾಡಿಕೊಳ್ಳಬೇಕು ಹಾಗೂ ಅಗತ್ಯ ಚಿಕಿತ್ಸಾ ಪರಿಕರಗಳನ್ನು ಇಟ್ಟುಕೊಳ್ಳಬೇಕು. ಆದರೆ ಆಂಬುಲೆನ್ಸ್ ಸಿದ್ದವಿದ್ದರೂ ಉಳಿದ ಪ್ರಕ್ರಿಯೆಗಳಿಗೆ ಗ್ರಹಣ ಹಿಡಿದಿರುವುದರಿಂದ ರೈತರ ಮನೆ ಬಾಗಿಲಿಗೆ ಸೇವೆ ಒದಗಿಸುವ ಯೋಜನೆ ಇನ್ನೂ ರೈತರ ಪಾಲಿಗೆ ಕನಸಾಗಿಯೇ ಉಳಿದಿದೆ.
1.82 ಜಾನುವಾರು: ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸುಮಾರು 1.82 ಲಕ್ಷ ಜಾನುವಾರುಗಳಿವೆ. ಈಗಾಗಲೇ ಚರ್ಮಗಂಟು, ಕಾಲುಬಾಯಿ ರೋಗ ಸೇರಿ ವಿವಿಧ ರೋಗಗಳು ರಾಸುಗಳನ್ನು ಸಾಕಷ್ಟು ಬಾಧಿಸಿವೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ರಾಸುಗಳು ಸಾವನ್ನಪ್ಪುವ ಪ್ರಕರಣಗಳು ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪಶುಗಳ ಪಾಲಿಗೆ ಸಂಜೀವಿನಿಯಾಗಬೇಕಿದ್ದ ‘ಪಶು ಸಂಜೀವಿನಿ’ಯೋಜನೆ ಸೇವೆ ಇದ್ದು ಇಲ್ಲದಂತಾಗಿದೆ.
ಆರ್‌ಟಿಒ ಪರಿಶೀಲನೆಯಾಗಿಲ್ಲ?

ಆಂಬುಲೆನ್ಸ್‌ಗಳ ಸಂಚಾರಕ್ಕೆ ಟೆಂಡರ್ ಪ್ರಕ್ರಿಯೆ ತೊಡಕಾಗಿ ಪರಿಣಿಸಿರುವುದರ ಜತೆಗೆ ಸಂಬಂಧಪಟ್ಟ ವಾಹನಗಳಿಗೆ ಆರ್‌ಟಿಒಗಳಿಂದ ಪರಿಶೀಲನೆಯಾಗಿ ಪ್ರಮಾಣ ಪತ್ರ ದೊರೆಯಬೇಕಿದೆ. ಆದರೆ ಈ ಪ್ರಕ್ರಿಯೆಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದ್ದು ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.


ಪಶುಗಳಿಗೆ ತುರ್ತು ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪಶು ಸಂಜೀವಿನಿ ಯೋಜನೆ ಮಹತ್ತರದಾಗಿದೆ, ಜಿಲ್ಲೆಯಲ್ಲಿ ಆಂಬುಲೆನ್ಸ್ ಚಾಲನೆಗೆ ಇರುವ ತೊಡಕುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು, ತಾಂತ್ರಿಕ ಅಥವಾ ಇನ್ಯಾವುದೇ ತೊಂದರೆ ಇದ್ದಲ್ಲಿ ಅದನ್ನು ಪರಿಶೀಲನೆ ನಡೆಸಿ ಶೀಘ್ರ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನ ಮಾಡಲಾಗುವುದು.
ಡಾ.ಎನ್.ಶಿವಶಂಕರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net