ಉಡುಪಿಯಲ್ಲಿ ಕೋಟಿ ಶ್ರೀಕೃಷ್ಣ ಮಂತ್ರ ಜಪ ಅಭಿಯಾನ...

Krishna 1
ಜುಲೈ 16ರಂದು 'ವೈರಮುಡಿ' ಅಲಂಕಾರದಲ್ಲಿ ಕಂಗೊಳಿಸಿದ ಉಡುಪಿ ಶ್ರೀಕೃಷ್ಣ.
Published on

ಜನ್ಮಾಷ್ಟಮಿಯ ಮಂಡಲೋತ್ಸವಕ್ಕೆ ಸಂಕಲ್ಪ

ಪರ್ಯಾಯ ಪುತ್ತಿಗೆ ಮಠದಿಂದ ಆಯೋಜನೆ

ಪ್ರಶಾಂತ ಭಾಗ್ವತ ಉಡುಪಿ

ಕೋಟಿ ಗೀತಾ ಲೇಖನ ಯಜ್ಞನದ ಮೂಲಕ ಉಡುಪಿಯಲ್ಲಿ ತಮ್ಮ ಚತುರ್ಥ ಪರ್ಯಾಯ ಸೇವೆ ಸಲ್ಲಿಸುತ್ತಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ಜನ್ಮಾಷ್ಟಮಿಯ ಮಂಡಲೋತ್ಸವದ ನಿಮಿತ್ತ ಕೋಟಿ ಶ್ರೀಕೃಷ್ಣ ಮಂತ್ರ ಜಪ ಅಭಿಯಾನ ಆರಂಭಿಸಿದ್ದಾರೆ.

ಸೆ.14ರಂದು ಸಂಪನ್ನಗೊಳ್ಳುವ ಶ್ರೀಕೃಷ್ಣ ಜಯಂತಿಯನ್ನು ಆ.1ರಿಂದ ವೈವಿಧ್ಯಮಯ 48 ದಿನಗಳ ಮಂಡಲೋತ್ಸವವನ್ನಾಗಿ ನಡೆಸಲು ಶ್ರೀಗಳು ಸಂಕಲ್ಪಿಸಿದ್ದಾರೆ. ತನ್ನಿಮಿತ್ತ ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ ಎಂಬ ಹರಿದಾಸರ ಮಾತಿನಂತೆ ಕೃಷ್ಣ ಜಪ ಮಾಡಲು ಕರೆ ನೀಡಿದ್ದಾರೆ.

ಚಾರ್ಟ್​ ವ್ಯವಸ್ಥೆ

Krishna 3
ಅಭಿಯಾನದ ಸ್ವಾಮಿ ಶ್ರೀಕೃಷ್ಣಾಯ ನಮ: ಎಂಬ ಮಂತ್ರವನ್ನು ದಿನಕ್ಕೆ ಕನಿಷ್ಠ 108 ಬಾರಿ ಪಠಿಸಬೇಕು. ಗರಿಷ್ಠ ಎಷ್ಟಾದರೂ ಆಗಬಹುದು. 48 ದಿನಗಳಲ್ಲಿ ಪಠಿಸಿದ ಸಂಖ್ಯೆ ನಮೂದಿಸಲು ಚಾರ್ಟ್​ (ಕಾರ್ಡ್​) ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನದ ಮಾಹಿತಿಯನ್ನು ಕೋಷ್ಟಕದಲ್ಲಿ ನಮೂದಿಸಬೇಕು. ಪೂರ್ಣಗೊಂಡ ಬಳಿಕ ಸೆ.17ರ ಬಳಿಕ ಮೂರು ದಿನದೊಳಗೆ ಪುತ್ತಿಗೆ ಶ್ರೀಮಠಕ್ಕೆ ಸಲ್ಲಿಸಬೇಕು.

ಸಾಮೂಹಿಕ ಜಪಕ್ಕೆ ಅವಕಾಶ

ಯಾವುದೇ ಜಾತಿ-ಮತ, ಮಹಿಳೆ-ಪುರುಷರು ಹಾಗೂ ಮಕ್ಕಳೆನ್ನದೆ ಯಾರು ಬೇಕಾದರೂ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಆ.1ರಂದು ಹಾಗೂ ಆ.15ರಂದು ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕವಾಗಿ ನಡೆಯಲಿರುವ ಶ್ರೀಕೃಷ್ಣ ಮಂತ್ರ ಜಪ ಕಾರ್ಯಕ್ರಮಕ್ಕೂ ಮುಕ್ತ ಅವಕಾಶವಿದೆ. ಮಾಹಿತಿಗಾಗಿ ಮೊ.ಸಂ. 9844295002, 9880773522, 9448952964 ಸಂಪರ್ಕಿಸಬಹುದು ಎಂದು ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.

ಸುಧೀಂದ್ರ ತೀರ್ಥರ ಸಂಸ್ಮರಣೆಯ ಪ್ರೇರಣೆ

Krishna 2
ಸುಗುಣೇಂದ್ರ ಶ್ರೀಗಳ ಗುರುಗಳ ಗುರುವಾಗಿದ್ದ ಹಾಗೂ ಶತಾಯುಷಿಗಳಾಗಿದ್ದ ಸುಧೀಂದ್ರ ತೀರ್ಥ ಶ್ರೀಪಾದರ ಸಂಸ್ಮರಣೆಗಾಗಿ ಕೋಟಿ ಶ್ರೀಕೃಷ್ಣ ಮಂತ್ರ ಜಪ ಅಭಿಯಾನ ಆಯೋಜಿಸಲಾಗಿದೆ. ಅವರು ಯಾವಾಗಲೂ ಸ್ವಾಮಿ ಶ್ರೀಕೃಷ್ಣಾಯ ನಮ: ಎನ್ನುತ್ತಿದ್ದರು. ಅಲ್ಲದೆ, 6 ಕೋಟಿ ಬಾರಿ ಆ ಮಂತ್ರ ಜಪಿಸಿ ಸಿದ್ಧಿ ಗಳಿಸಿದ್ದರು. ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ಪ್ರತಿಷ್ಠೆಗೈದ ಶ್ರೀಕೃಷ್ಣನ ಜನ್ಮಾಷ್ಟಮಿಗೆ ಎಲ್ಲರೂ ಪಾಲ್ಗೊಳ್ಳುವಂತಾಗಲು ಸುಲಭ ಮಂತ್ರ ಸೇವೆ ಕಲ್ಪಿಸಲಾಗಿದೆ ಎನ್ನುತ್ತಾರೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ.

ಅಶಾಂತಿ, ಉದ್ವಿಗ್ನತೆ, ಯುದ್ಧ ಭೀತಿ, ವಿವಿಧ ರೋಗಗಳ ಉಪದ್ರವದಿಂದ ವಿಶ್ವ ತಲ್ಲಣಗೊಳ್ಳುತ್ತಿದೆ. ಕಲಿಯುಗದಲ್ಲಿ ಈ ಎಲ್ಲ ಕಷ್ಟ-ಕಾರ್ಪಣ್ಯಗಳಿಂದ ಪಾರಾಗಲು ಕೃಷ್ಣೋಪಾಸನೆಯೊಂದೇ ಮಾರ್ಗವಾಗಿದೆ. ಅನ್ನೋದ್ಧಾರ ಮತ್ತು ಲೋಕಕಲ್ಯಾಣಕ್ಕಾಗಿ ಆಯೋಜಿಸಿರುವ ಕೋಟಿ ಶ್ರೀಕೃಷ್ಣ ಮಂತ್ರ ಸ್ವಾಮಿ ಶ್ರೀಕೃಷ್ಣಾಯ ನಮ: ಜಪ ಅಭಿಯಾನದಲ್ಲಿ ಭಕ್ತರೆಲ್ಲರೂ ಪಾಲ್ಗೊಳ್ಳಬೇಕು. ಪೊಡವಿಗೊಡೆಯ ಉಡುಪಿ ಕೃಷ್ಣನ ಕೃಪೆಗೆ ಪಾತ್ರರಾಗಬೇಕು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net