ದೇವರನ್ನು ನಂಬಿದರೆ ಯಾರಿಗೂ ಕೆಟ್ಟದಾಗುವುದಿಲ್ಲ

10-FEB-GPT-2
ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದ ಶ್ರೀ ಪಾರ್ವತಾಂಬೆ ಸ್ವರ್ಣ ಕಲ್ಲಿನ ದೇವಾಲಯದ ನಾಮಫಲಕವನ್ನು ಎಚ್.ಎಂ.ಗಣೇಶ್ ಪ್ರಸಾದ್ ಲೋಕಾರ್ಪಣೆಗೊಳಿಸಿದರು. ಸುತ್ತೂರು ಶ್ರೀಗಳು ಉದ್ಘಾಟಿಸಿದರು. ಸಿದ್ದಲಿಂಗಮಹಾಸ್ವಾಮೀಜಿ, ಚನ್ನಬಸವಸ್ವಾಮೀಜಿ, ಮಹಾಂತಸ್ವಾಮೀಜಿ, ಸಿದ್ದಮಲ್ಲಸ್ವಾಮೀಜಿ, ಚೆನ್ನಬಸವಸ್ವಾಮೀಜಿ, ಸಿ.ಎಸ್.ನಿರಂಜನಕುಮಾರ್, ಎಚ್.ಎಸ್.ನಂಜಪ್ಪ ಇದ್ದರು.
Published on

ಗುಂಡ್ಲುಪೇಟೆ: ದೇವಾಲಯ ಜೀರ್ಣೋದ್ಧಾರ ಮಾಡುವಲ್ಲಿ ಗ್ರಾಮಸ್ಥರು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದು, ಮುಂದಿನ ದಿನಗಳಲ್ಲೂ ಹೀಗೆ ಶಾಂತಿ ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು ಸುತ್ತೂರು ಮಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸ್ವರ್ಣ ಕಲ್ಲಿನ ಪಾರ್ವತಾಂಬೆ ಅಮ್ಮನ ದೇವಸ್ಥಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಸಗೂಲಿ ಚಿಕ್ಕ ಗ್ರಾಮವಾದರೂ ಗ್ರಾಮದೇವತೆ ದೇವಾಲಯ ಜೋರ್ಣೋದ್ಧಾರ ಕೈಗೊಂಡಿರುವ ರೀತಿ ಅನನ್ಯವಾಗಿದೆ. ದೇವರನ್ನು ನಂಬಿದರೆ ಯಾರಿಗೂ ಕೆಟ್ಟದಾಗುವುದಿಲ್ಲ. ಪುರಾತನ ಕಾಲದಿಂದಲೂ ಕಾಡಿನಲ್ಲಿ ನೆಲೆಸಿರುವ ಅಲ್ಲಳ್ಳಿ ಮಾರಮ್ಮನವರ ಜಾತ್ರೆಯನ್ನು ಪ್ರತಿ ವರ್ಷವೂ ಶ್ರದ್ಧಾ ಭಕ್ತಿಯಿಂದ ನಡೆಸುತ್ತಿರುವ ಗ್ರಾಮಸ್ಥರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಮ್ಮನವರಿಗೆ ಸ್ವರ್ಣ ಕಲ್ಲಿನ ದೇವಾಲಯ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ. ಜಾನುವಾರುಗಳ ದೇವತೆಯಾದ ಅಲ್ಲಳ್ಳಿ ಮಾರಮ್ಮ ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಟ್ಟಿಲ್ಲ ಎಂದು ಹೇಳಿದರು.

ಈ ಅಂಗವಾಗಿ ಫೆ. 2ರಿಂದ 10ರವರೆಗೆ ನಾನಾ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳಲಾಗಿತ್ತು. ಸೋಮವಾರ ಶ್ರೀ ಪಾರ್ವತಾಂಬೆೆ ಅಮ್ಮನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನೆ, ಮಹಾರುದ್ರಾಭಿಷೇಕ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ, ದೇಗುಲಮಠದ ಚನ್ನಬಸವಸ್ವಾಮೀಜಿ, ದೇವನೂರು ಮಠದ ಮಹಾಂತಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲ ಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ, ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಮಾದಾಪಟ್ಟಣ ಮಠದ ತೋಂಟದಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ ಶಿಲ್ಪಿಗಳಾದ ಮಹೇಶ್ ಅರಸ್, ಸೋಮಶೇಖರ್, ವಿಗ್ರಹ ನಿರ್ಮಾಣ ಮಾಡಿದ ಸುರೇಂದ್ರ ಅವರನ್ನ ಸನ್ಮಾನ ಮಾಡಲಾಯಿತು. ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net