ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಬಲವರ್ಧನೆ

31
Published on

ಮೈಸೂರು: ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪ್ರತಿ ಜಿಲ್ಲೆಯಲ್ಲೂ ನಮ್ಮ ಪಕ್ಷ ಬಲವರ್ಧನೆಗೊಳ್ಳುತ್ತಿದ್ದು, ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹೇಳಿದರು.

ಜಿಲ್ಲಾ ಗ್ರಾಮಾಂತರ ಬಿಜೆಪಿ ಘಟಕದ ವತಿಯಿಂದ ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ನೂತನವಾಗಿ ನೇಮಕಗೊಂಡ ಮಂಡಲ ಅಧ್ಯಕ್ಷರ, ಪದಾಧಿಕಾರಿಗಳು ಹಾಗೂ ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಜಯಭೇರಿ ಗಳಿಸುವುದರೊಂದಿಗೆ ನಮ್ಮೆಲ್ಲರಿಗೂ ಜವಾಬ್ದಾರಿ ಕೊಟ್ಟ ಪಕ್ಷಕ್ಕೆ ಹಾಗೂ ನಮ್ಮ ನಾಯಕರಾದ ಬಿ.ವೈ.ವಿಜಯೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸೋಣ ಎಂದರು.

ನಾವೆಲ್ಲರೂ ನಮ್ಮ ರಾಷ್ಟ್ರೀಯ ಪಕ್ಷದ ಪದಾಧಿಕಾರಿಗಳಾಗಿರುವುದಕ್ಕೆ ಸಂತೋಷ ಪಡಬೇಕು. ಹಾಗೆಯೇ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಬಹಳ ಚುರುಕಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸ ಕಂಡು ಬೇರೆ ದೇಶಗಳು ಅವರನ್ನು ಗೌರವಿಸುತ್ತಿರುವುದು ಹಾಗೂ ಹೆಮ್ಮೆ ಪಡುತ್ತಿರುವುದನ್ನು ನೋಡಿದರೆ ನಮ್ಮ ಭಾರತ ಇಂದೇ ವಿಶ್ವಗುರುವಾಗಿದೆ ಎಂಬ ಹೆಮ್ಮೆ ಇದೆ ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಭಾರಿ ಫಣೀಶ್ ಮಾತನಾಡಿ, ನೂತನವಾಗಿ ನಿಯುಕ್ತಿ ಹೊಂದಿರುವ ಪಕ್ಷದ ಎಲ್ಲ ಪದಾಧಿಕಾರಿಗಳು ಮೊದಲಿಗೆ ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು. ಸಂಘಟನೆಗೆ ಸಮಯ ಕೊಡಬೇಕು. ತಮ್ಮನ್ನು ಗುರುತಿಸಿ ಜವಾಬ್ದಾರಿ ಕೊಟ್ಟ ಪಕ್ಷಕ್ಕೆ ಗೌರವ ನೀಡಿ ಸಂಘಟಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ಹೆಜ್ಜೆಯೂ ನಮ್ಮೆಲ್ಲರಿಗೂ ಮಾದರಿ. ಪಕ್ಷದ ಬಗ್ಗೆ ಅವರಿಗಿರುವ ಬದ್ಧತೆ ಬಗ್ಗೆ ತಿಳಿದು ನಾವೆಲ್ಲ ಮುನ್ನಡೆಯಬೇಕು. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಪದಾಧಿಕಾರಿಯೂ ಮೋದಿ ಅವರಂತೆ ಕೆಲಸ ಮಾಡಬೇಕು ಎಂದರು.

ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ನೂತನ ಪದಾಧಿಕಾರಿಗಳು ಸಂಘಟಿತರಾಗಿ ದೇಶ ಕಾಯುವ ವೀರಯೋಧರಂತೆ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸಮಯವನ್ನು ಸಂಘಟನೆಗೆ ಕೊಟ್ಟು ಪ್ರಾಮಾಣಿಕತೆ ಮೆರೆಯಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಮಹೇಶ್ ಮಡವಾಡಿ, ಮುಖಂಡರಾದ ಬಾಲಣ್ಣ, ಕಿರಣ್ ಜಯರಾಮೇಗೌಡ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net