

ಶಿವಮೊಗ್ಗ: ಯುವ ಕಾಂಗ್ರೆಸ್ ಚುನಾವಣೆಯ ಇತಿಹಾಸದಲ್ಲೇ ಭಾರಿ ಮತಗಳ ಅಂತರದಿಂದ ಕಾರ್ಯಕರ್ತರು ಗೆಲ್ಲಿಸಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಪಕ್ಷ ಸಂಘಟನೆಗೆ ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಯುವ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಯುವ ಕಾಂಗ್ರೆಸ್ ಘಟಕದ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತೇನೆ. ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾಪ್ರಭುತ್ವದ ಮಾದರಿಯಲ್ಲೇ ನಡೆಸಲಾಗುತ್ತಿದೆ. ಯುವ ಕಾಂಗ್ರೆಸ್ ಸಂಘಟನೆಗೆ ನೇತೃತ್ವ ವಹಿಸಲು ನನಗೆ ಸದಾವಕಾಶ ಸಿಕ್ಕಿದೆ. ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಮಾತನಾಡಿ, ಜಿಲ್ಲಾ ಯುವ ಕಾಂಗ್ರೆಸ್‌ನ ಚುನಾವಣಾ ಪ್ರಕ್ರಿಯೆ 2024ರ ಆ.20ರಿಂದ ಸೆ.22 ರವರೆಗೆ ನಡೆದಿತ್ತು. ಜಿಲ್ಲೆಯಲ್ಲಿ ಒಟ್ಟು 1,22,144 ಮತದಾರರು ನೋಂದಣಿಯಾಗಿದ್ದರು. ಇದರಲ್ಲಿ ಸುಮಾರು 58 ಸಾವಿರ ಮತದಾರರ ನೋಂದಣಿ ತಿರಸ್ಕೃತಗೊಂಡು, 64,081 ಅರ್ಹ ಮತದಾರರು ಪದಾಧಿಕಾರಿಗಳ ಆಯ್ಕೆಗೆ ಹಕ್ಕು ಚಲಾಯಿಸಿದ್ದರು ಎಂದು ವಿವರಿಸಿದರು.
ಪ್ರಮುಖರಾದ ವಿಜಯಕುಮಾರ್ (ದನಿ), ಯು.ಶಿವಾನಂದ, ಮಧುಸೂದನ್, ಚೇತನ್ ಗೌಡ, ವಿಜಯ್, ರೇಷ್ಮಾ, ಹರ್ಷಿತಾ ರಾಣಿ, ಅಬ್ದುಲ್ ಸತ್ತಾರ್, ಪ್ರವೀಣ್‌ಕುಮಾರ್, ಆಕಾಶ್ ಇತರರಿದ್ದರು.