

ಬೆಳಗಾವಿ: ನಾನಾ ಕಾರಣಗಳಿಂದ ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಹೋಗಿರುವ ಹಿರಿಯ ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಇರುವ ಮಾಜಿ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿದ್ದು, ಹಿರಿಯ ನಾಯಕರನ್ನು ಕಾಂಗ್ರೆಸ್‌ಗೆ ಆಹ್ವಾನಿಸುವ ಪ್ರಕ್ರಿಯೆಗೆ ಬೆಳಗಾವಿಯಲ್ಲಿ ಚಾಲನೆ ನೀಡಿದ್ದೇವೆ. ಗೋಕಾಕನಲ್ಲಿ ಜೆಡಿಎಸ್‌ನ ಅಶೋಕ ಪೂಜಾರಿ ಸೇರಿ ಹಲವು ಮುಖಂಡರನ್ನು ನಾನೇ ಸಂಪ ರ್ಕಿಸಿ ಆಹ್ವಾನಿಸಿದ್ದು, ತಮ್ಮ ನಿರ್ಧಾರ ತಿಳಿಸಲು ಅವರು ಕಾಲಾವ ಕಾಶ ಕೇಳಿದ್ದಾರೆ ಎಂದರು.
ಅವರನ್ನೇ ಕೇಳಿ: ‘ನಾನು ಮನಸ್ಸು ಮಾಡಿದರೆ 24 ತಾಸಿನಲ್ಲೇ ಕಾಂಗ್ರೆಸ್‌ನ ಐವರು ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ’ ಎಂದು ಸಚಿವ ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಗೆ ಸತೀಶ ಪ್ರತಿಕ್ರಿಯಿಸಿ, ಈ ಹಿಂದೆ 10 ಶಾಸಕರನ್ನು ಕರೆತರುವುದಾಗಿ ಹೇಳಿದ್ದರು. ಈಗ 5 ಶಾಸಕರು ಎನ್ನುತ್ತಿದ್ದಾರೆ. ಯಾರು ಆ ಶಾಸಕರು ಎಂಬುದನ್ನು ಸಚಿವರೇ ಬಹಿರಂಗಪಡಿಸಬೇಕು. ನಮ್ಮ ಪಕ್ಷದ ತೊರೆದು ಯಾವ ಶಾಸಕರೂ ಬಿಜೆಪಿ ಸೇರುವುದಿಲ್ಲ ಎಂದರು.
ಮಾನದಂಡ ಮರುಪರಿಶೀಲಿಸಿ: ಇಂದು ಪ್ರತಿಯೊಬ್ಬರ ಮನೆಯಲ್ಲಿ ಟಿವಿ, ಬೈಕ್ ಇವೆ. ಹಾಗಾಗಿ, ಬಿಪಿಎಲ್ ಕಾರ್ಡ್‌ಗಿರುವ ಮಾನದಂಡ ಮರುಪರಿಶೀಲಿಸಬೇಕು. ಜನರ ಆದಾಯಕ್ಕೆ ತಕ್ಕಂತೆ ನೂತನ ಕಾಯ್ದೆ ರೂಪಿಸಿ ಎಲ್ಲರಿಗೂ ಕಾರ್ಡ್ ಸಿಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಳೆ ರಾಷ್ಟ್ರೀಯ ಹೆದ್ದಾರಿ ತಡೆ: ತೈಲ ಬೆಲೆ ಏರಿಕೆ ವಿಚಾರವಾಗಿ ದೇಶದ ಜನತೆ ಈಗ ಅಸಮಾಧಾನಕ್ಕೊಳಗಾಗಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತಂದವರೇ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ೆ.18ರಂದು ಯಮಕನಮರಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಸತೀಶ ಜಾರಕಿಹೊಳಿ ಮಾಹಿತಿ ನೀಡಿದರು.