ಪಕ್ಷದ ಸಿದ್ಧಾಂತ ತಿಳಿಸುವ ಹೊಣೆಗಾರಿಕೆ ನಿಮ್ಮದು

1Manju6-Web
ಬೆಳಗಾವಿ ನಗರದ ಗೋಮಟೇಶ ಸಭಾಭವನದಲ್ಲಿ ಜರುಗಿದ ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಸಂಚಾಲಕರ ಒಂದು ದಿನದ ಮಾಧ್ಯಮ ಮಂಥನ ಕಾರ್ಯಾಗಾರವನ್ನು ಸಚಿವರಾದ ರಮೇಶ ಜಾರಕಿಹೊಳಿ, ಉಮೇಶ ಕತ್ತಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಇತರರು ಇದ್ದರು.
Published on

ಬೆಳಗಾವಿ: ಸರ್ಕಾರದ ಸತ್ಕಾರ್ಯಗಳನ್ನು ದೇಶಾದ್ಯಂತ ಮನೆ ಮನೆಗೆ ತಿಳಿಸುವ ಕಾರ್ಯ ಮಾಧ್ಯಮದಿಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಗೋಮಟೇಶ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಸಂಚಾಲಕರ ಒಂದು ದಿನದ ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯಾವುದೇ ಸುದ್ದಿಗಳು ತಕ್ಷಣ ಗೊತ್ತಾಗುವುದು ಮಾಧ್ಯಮದಿಂದ. ಇಂದು ಬಿಜೆಪಿಯಲ್ಲಿ ಮಂಡಲ ಹಂತದಿಂದ ಜ್ಞಾನಿಗಳು, ಸುಶಿಕ್ಷಿತರು ಇದ್ದಾರೆ. ಕಾರ್ಯಾಗಾರದ ಮೂಲಕ ಸರ್ಕಾರ ಹಾಗೂ ಪಕ್ಷದ ತತ್ತ್ವ-ಸಿದ್ಧಾಂತಗಳನ್ನು ಬಿತ್ತರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಮಾತನಾಡಿ, ಇಂದು ಬಿಜೆಪಿ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕಾದರೆ ವಿರೋಧಿಗಳು ಮಾಡಿರುವ ಜನವಿರೋಧಿ ಕಾರ್ಯ ಒಂದು ಕಡೆಯಾದರೆ ಬಿಜೆಪಿ ರಾಷ್ಟ್ರಾಭಿಮಾನದೊಂದಿಗೆ ಅತ್ಯುತ್ತಮ ಆಡಳಿತ ನೀಡುತ್ತಿರುವುದರ ಕುರಿತು ಜಾಗೃತಿ ಮೂಡಿಸಿದ ಶ್ರೇಯಸ್ಸು ಮಾಧ್ಯಮಕ್ಕಿದೆ. ಇಂತಹ ಗುರುತರವಾದ ಜವಾಬ್ದಾರಿ ಹೊತ್ತಿರುವ ಬಿಜೆಪಿ ಮಾಧ್ಯಮ ಸಂಚಾಲಕರು ತಮಗೆ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡುತ್ತಿರುವುದು ಶ್ಲಾಘನೀಯ ಎಂದರು. ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ, ಕರುಣಾಕರ ಖಾಸಲೆ, ಸಿದ್ದು ಮೋಗಲಿಶೆಟ್ಟರ್, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಶಾಸಕ ಅಭಯ ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net