ಸಂಭ್ರಮದಿಂದ ಭಾಗವಹಿಸಿ ನುಡಿಹಬ್ಬ ಯಶಸ್ವಿಗೊಳಿಸಿ

18_11_Mdy_03(Kasapa Ratha)
ಕೆ.ಆರ್.ಪೇಟೆ ಪಟ್ಟಣದಲ್ಲಿ ಕನ್ನಡ ಜ್ಯೋತಿ ಜಾಗೃತಿ ರಥ ಸ್ವಾಗತಿಸಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದರು. ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ತಹಸೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಅಶೋಕ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಪಂ ಮಾಜಿ ಸದಸ್ಯ ದೇವರಾಜು, ಪುರಸಭೆ ಅಧ್ಯಕ್ಷೆ ಪಂಕಜಾ, ಮುಖ್ಯಾಧಿಕಾರಿ ನಟರಾಜು ಇತರರಿದ್ದರು.
Published on

ಕೆ.ಆರ್.ಪೇಟೆ: ಮಂಡ್ಯ ನಗರದಲ್ಲಿ 30 ವರ್ಷಗಳ ನಂತರ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತರು, ಮಹಿಳೆಯರು ಹಾಗೂ ಯುವಜನರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ನುಡಿಹಬ್ಬವನ್ನು ಯಶಸ್ವಿಗೊಳಿಸಿ ಇತಿಹಾಸ ನಿರ್ಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಪಟ್ಟಣದಲ್ಲಿ ಸಂಚರಿಸಿದ ಕನ್ನಡ ಜ್ಯೋತಿ ಜಾಗೃತಿ ರಥಕ್ಕೆ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡಿ.20, 21 ಹಾಗೂ 22ರಂದು ಕನ್ನಡ ಜಾತ್ರೆಯನ್ನು ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಪಂಚಾಯಿತಿ ಕೇಂದ್ರವನ್ನು ತಲುಪಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮತ್ತೊಂದು ರಥವು ಸಂಚರಿಸುತ್ತಿದೆ. ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಕನ್ನಡದ ಜಾತ್ರೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಪ್ರತಿ ದಿನವೂ ಕನಿಷ್ಠ 50 ಸಾವಿರದಂತೆ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿಕೊಡಬೇಕು ಎಂದರು.

ಸಮ್ಮೇಳನ ನಡೆಸಲು ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ವಿಶಾಲವಾದ ಸ್ಥಳ ನಿಗದಿ ಮಾಡಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ಬಾಕಿಯಿದ್ದು, ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು. ಜಿಲ್ಲೆಯ ಜನರಿಗೆ 30 ವರ್ಷದ ನಂತರ ದೊರೆತಿರುವ ಅಪರೂಪದ ಅವಕಾಶವನ್ನು ಪ್ರೀತಿಯಿಂದ ಸ್ವಾಗತಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ತಹಸೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಅಶೋಕ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಪಂ ಮಾಜಿ ಸದಸ್ಯ ದೇವರಾಜು, ಪುರಸಭೆ ಅಧ್ಯಕ್ಷೆ ಪಂಕಜಾ, ಮುಖ್ಯಾಧಿಕಾರಿ ನಟರಾಜು, ಕ್ಷೇತ್ರಶಿಕ್ಷಣಾಧಿಕಾರಿ ತಿಮ್ಮೇಗೌಡ, ಕಸಾಪ ಪೂರ್ಣಚಂದ್ರತೇಜಸ್ವಿ, ಕೆ.ಆರ್.ನೀಲಕಂಠ, ಡಾ.ಶಶಿಧರ್, ಅರುಣಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net