

ಗುಳೇದಗುಡ್ಡ : ಲಂಚ ಕೇಳುವುದು ಅಪರಾಧ. ಅದರಂತೆ ಲಂಚ ಕೊಡುವುದು ಕೂಡ ಒಂದು ಅಪರಾಧವೇ ಆಗಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗವಹಿಸಬೇಕು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಿರಾದಾರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಲೋಕಾಯುಕ್ತ ಇಲಾಖೆ ವತಿಯಿಂದ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲಾಖೆಗಳಲ್ಲಿ ಸರ್ಕಾರಿ ಕಾನೂನು ಅನ್ವಯ ಕೆಲಸ ಮಾಡಿಸಿಕೊಳ್ಳಬೇಕು. ಆಮಿಷ ಒಡ್ಡುವವರು ಯಾರೇ ಇರಲಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಕಚೇರಿಯಲ್ಲಿ ಯಾರಾದರೂ ಲಂಚ ಕೇಳಿದರೆ ಲೋಕಾಯುಕ್ತ ಇಲಾಖೆಯ ಸಹಾಯವಾಣಿಗೆ ದೂರು ಸಲ್ಲಿಸಬೇಕು ಎಂದರು.
ಕಾಲೇಜಿನ ಉಪ ಪ್ರಾಚಾರ್ಯ ಎಂ.ಪಿ. ಮಾಗಿ ಮಾತನಾಡಿ, ಶೈಕ್ಷಣಿಕ ರಂಗದಿಂದ ಸಾಮಾಜಿಕ ರಂಗದಲ್ಲಿ ಪ್ರವೇಶ ಮಾಡಿದಾಗ ಪ್ರಾಮಾಣಿಕವಾಗಿ ಬದುಕಬೇಕು ಎಂದರು.
ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಲೋಕಾಯುಕ್ತ ಇಲಾಖೆಯ ಶಂಕರ ಬಳಬಟ್ಟಿ, ಬಸವರಾಜ ದೇಸಾಯಿ, ಹನುಮಂತ ಮಾಸರೆಡ್ಡಿ, ಶಿಕ್ಷಕರಾದ ಸಿ.ಎಂ. ಕುರುಬರ, ಸಂಗಮೇಶ ಕಡಿ, ಎಸ್.ಎಸ್. ಬಿರಾದಾರ, ಎಲ್.ಐ. ಅಂಗಡಿ, ದೇವರಾಜ ಅಡ್ಡಿ, ಆರ್.ವಿ. ಬಳ್ಳ ಇತರರು ಇದ್ದರು.