ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ

Participate in the Dussehra Games
Published on

ಸವಣೂರ: ಮಕ್ಕಳು ಹಾಗೂ ಯುವಜನತೆ ದಸರಾ ಕ್ರೀಡಾಕೂಟದ ಸದುಪಯೋಗ ಪಡೆಯಬೇಕು ಎಂದು ಸವಣೂರ ಅಮೆಚೂರ್ ಕಬಡ್ಡಿ ಸಂಸ್ಥೆ ಅಧ್ಯಕ್ಷ ಗಂಗಾಧರ ಬಾಣದ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಅಮೆಚೂರ್ ಕಬಡ್ಡಿ ಸಂಸ್ಥೆ ಸವಣೂರ ವತಿಯಿಂದ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು, ಉದ್ಯೋಗಿಗಳು, ಕೂಲಿ ಕಾರ್ಮಿಕರು ಹಾಗೂ ಕ್ರೀಡಾ ಆಸಕ್ತರಿಗೆ ಮಾತ್ರ ದಸರಾ ಕ್ರೀಡಾಕೂಟ ಮುಖ್ಯ ವೇದಿಕೆಯಾಗುತ್ತಿದೆ. ಇನ್ನುಳಿದವರು ವೇದಿಕೆ ಬಳಸಿಕೊಳ್ಳಬೇಕು ಎಂದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ಮಾತನಾಡಿ, ದಸರಾ ಕ್ರೀಡಾಕೂಟ ಆಯೋಜನೆ ಹಾಗೂ ಯಶಸ್ವಿಗಾಗಿ ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಹತ್ವದ ಕ್ರೀಡಾಕೂಟದಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಆಹ್ವಾನಿತ ಅಧಿಕಾರಿಗಳು ಪಾಲ್ಗೊಳ್ಳದಿರುವುದು ಬೇಸರ ಸಂಗತಿಯಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದರು.

ಕ್ರೀಡಾಜ್ಯೋತಿ ಬೆಳಗಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆನಂದ ಮತ್ತಿಗಟ್ಟಿ ಮಾತನಾಡಿ, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳು ಪರಸ್ಪರ ಸಹಕಾರ ನೀಡುವುದು ಅವಶ್ಯವಾಗಿದೆ. ಕ್ರೀಡೆಯ ಬಗ್ಗೆ ಮಕ್ಕಳಿಗೆ ಹಾಗೂ ಯುವಜನರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ತರಬೇತಿ ಅವಶ್ಯವಾಗಿದೆ ಎಂದರು.

ಕರವೇ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪರಶುರಾಮ ಈಳಗೇರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಅಮೆಚೂರ್ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಮೈಲಾರಪ್ಪ ಮೂಲಿಮನಿ, ಪದಾಧಿಕಾರಿಗಳಾದ ಅಪ್ಪಣ್ಣ ತೊಂಡೂರ, ಹರೀಶಗೌಡ ಪಾಟೀಲ, ಪತ್ರಕರ್ತ ಗಣೇಶಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net