

ಬಾಳೆಹೊನ್ನೂರು: ಪ್ರತಿ ವಿದ್ಯಾರ್ಥಿಯೂ ಸದೃಢ ದೇಹ ಹೊಂದಲು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಪನ್ಯಾಸಕ ಕೆ.ಎಂ.ರಾಕೇಶ್ ಹೇಳಿದರು.
ಪಟ್ಟಣದ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡೆಯಲ್ಲಿ ಪಾಲ್ಗೊಂಡರೆ ದೈಹಿಕ, ಮಾನಸಿಕ ಸ್ಥಿರತೆ ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2012ರಿಂದ ಪ್ರತಿ ವರ್ಷ ಆ.29ರಂದು ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸುತ್ತಿದೆ ಎಂದರು.
ಮೇಜರ್ ಧ್ಯಾನ್ ಚಂದ್ ಹಾಕಿಯಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ದೇಶ ಸ್ಮರಿಸುತ್ತಿದೆ. ಅವರು ಮೂರು ಬಾರಿ ಒಲಿಂಪಿಕ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನವನ್ನು ತಂದುಕೊಟ್ಟಿದ್ದಾರೆ. ಸತತವಾಗಿ ಪರಿಶ್ರಮ ವಹಿಸಿದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂಬುದನ್ನು ಧ್ಯಾನ್ ಚಂದ್ ತೋರಿಸಿಕೊಟ್ಟಿದ್ದಾರೆ. ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿ ಎಂದರು. ಪ್ರಾಚಾರ್ಯ ಕೆ.ಆರ್.ಬೂದೇಶ್, ಉಪನ್ಯಾಸಕ ಅರವಿಂದ್, ಉಮಾಶಂಕರ್ ಇತರರಿದ್ದರು.