ಮಣ್ಣು ಆರೋಗ್ಯ ಜಾಗೃತಿ ತರಬೇತಿಯಲ್ಲಿ ಪಾಲ್ಗೊಳ್ಳಲಿ

GKN MANNU EXAM
Published on

ಗೋಕರ್ಣ: ಕೃಷಿ ಇಲಾಖೆ ಆಶ್ರಯದಲ್ಲಿ ಮಣ್ಣು ಆರೋಗ್ಯ ಮತ್ತು ಫಲವತ್ತತೆ ಯೋಜನೆಯಡಿ ಮಣ್ಣು ಆರೋಗ್ಯ ತರಬೇತಿ ಕಾರ್ಯಕ್ರಮ ಇಲ್ಲಿನ ಬಿಜ್ಜೂರು ರಂಗ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.

ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಸ್.ವಿ. ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಜೀವನ ಶುದ್ಧ ಗಾಳಿ ಮತ್ತು ನೀರು ಅವಲಂಬಿಸಿರುವಂತೆ ಫಲವತ್ತಾದ ಮಣ್ಣು ಕೂಡ ನಮ್ಮ ಬದುಕಿನ ಅವಿಭಾಜ್ಯ ಅಗತ್ಯವಾಗಿದೆ. ಆದರೆ, ಇಂದು ಕಲುಷಿತವಾಗುತ್ತಿರುವ ಗಾಳಿ, ನೀರಿನಂತೆ ನಮಗೆ ಎಲ್ಲ ಬಗೆಯ ಆಹಾರದ ಏಕೈಕ ಮೂಲವಾದ ಮಣ್ಣು ಸಹ ಫಲವತ್ತತೆ ಕಳೆದುಕೊಳ್ಳುತ್ತಿದೆ. ವಿವಿಧ ಬಗೆಯಲ್ಲಿ ನಮ್ಮ ಸ್ವಾರ್ಥಕ್ಕಾಗಿ ನಮ್ಮಿಂದ ಆಗುತ್ತಿರುವ ಮಣ್ಣಿನ ದುರುಪಯೋಗವೇ ಇದಕ್ಕೆ ಕಾರಣ. ಆದ್ದರಿಂದ ಕೃಷಿ ಇಲಾಖೆ ಮಣ್ಣು ಆರೋಗ್ಯದ ಜಾಗೃತಿಗೆ ಆಯೋಜಿಸುವ ತರಬೇತಿಯಲ್ಲಿ ಹೆಚ್ಚಿನ ರೈತರು ಭಾಗವಹಿಸಿ ಚಾಚೂ ತಪ್ಪದೆ ಮಾರ್ಗಸೂಚಿ ಅನುಸರಿಸಿ ಮಣ್ಣು ಫಲವತ್ತತೆ ಹೆಚ್ಚಿಸಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತರಾದ ವೆಂಕಟೇಶ ಗೌಡ, ಬೀರಾ ಗೌಡ, ಇತರರು ಉಪಸ್ಥಿತರಿದ್ದರು. ನಂದಿತಾ ಪಟಗಾರ, ಮಂಜುನಾಥ ಹೋರಕೇರಿ, ತನುಜಾ ಗೌಡ ಮತ್ತು ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ ರೇವಣಕರ ಕರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net