ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ

14114
Published on

ಬೆಳಗಾವಿ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ದಿನದಲ್ಲಿ ಕನಿಷ್ಠ 5 ನಿಮಿಷವನ್ನಾದರೂ ಧ್ಯಾನಕ್ಕೆ ಮೀಸಲಿಡಬೇಕು ಎಂದು ಹಾರೂಗೇರಿಯ ಜಂಬಗಿ ಸ್ಮಾರಕ ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಲಕ್ಷ್ಮಣ ಜಂಬಗಿ ಹೇಳಿದರು.

ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ಜಿಬಿಐಟಿಯಲ್ಲಿ 2020-21ನೇ ಸಾಲಿನ ಬಿ.ಇ. ಪ್ರಥಮ ವರ್ಷದ ಆನ್‌ಲೈನ್ ತರಗತಿಗಳು ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಮಂಗಳವಾರದಿಂದ ಡಿ. 21ರವರೆಗೆ ಆಯೋಜಿಸಿರುವ ವಿವಿಧ ವಿಷಯಗಳ ಮಾಹಿತಿ ನೀಡುವ ಮತ್ತು ವಿಭಾಗಗಳ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರೊನಾದಿಂದಾಗಿ ಜೀವನಶೈಲಿಯೇ ಬದಲಾಗಿದ್ದು, ಎಂಥದ್ದೇ ಪರಿಸ್ಥಿಯಲ್ಲಿಯೂ ಜೀವನ ಸಾಗಿಸುವುದನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯ ಡಾ.ಸಿದರಾಮಪ್ಪ ಇಟ್ಟಿ, ಶಿಕ್ಷಣಕ್ಕೆ ಮೊಬೈಲ್ ಬಳಕೆ ಅವಶ್ಯ. ಆದರೆ, ಮೊಬೈಲ್ ಬಳಕೆ ಇತಿಮಿತಿಯಲ್ಲಿರಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಫ್.ವಿ. ಮಾನ್ವಿ, ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅತಿಥಿಯಾಗಿದ್ದ ಪೂಜಾ ಹಿರೇಕೋಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಶ್ರದ್ಧಾ ಮತ್ತಿಕಟ್ಟಿ, ಮಹೇಶ ಈಶ್ವರಪ್ಪಗೋಳ, ಮಹೇಂದ್ರ ಬಿರಾದಾರ, ಅಭಿನಂದನ ನಸಾಲಪುರ ಮಾತನಾಡಿದರು. ಸಿವಿಲ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಹರ್ಷಿತಾ ಹಾಗೂ ಮೇಘಾ ಸ್ವಾಗತಗೀತೆ ಹಾಡಿದರು.

ಸಂಯೋಜನಾಧಿಕಾರಿ ಪ್ರೊ.ವಿವೇಕಾನಂದ ಖೋತ ಸ್ವಾಗತಿಸಿದರು. ಮೆಕಾನಿಕಲ್ ವಿಭಾಗ ಮುಖ್ಯಸ್ಥ ಡಾ. ರಾಜೇಂದ್ರ ಗಲಗಲಿ ವಿಭಾಗಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಮಂಜುನಾಥ ಶರಣಪ್ಪನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net