ಪತ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ

1001244638
ಆಲೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಪತ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕ ಸಿಮೆಂಟ್ ಮಂಜು ಭಾಗವಹಿಸಿ ಮಾತನಾಡಿದರು.
Published on

ಆಲೂರು: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಪಠ್ಯದ ಜತೆಗೆ ಪತ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಅನುಭವ ಹೆಚ್ಚುತ್ತದೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಆಕರ್ಷಣೆಗಳಿರುತ್ತವೆ, ಅವುಗಳಿಗೆ ಬಲಿಯಾಗದೇ ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಿಕ್ಕ ಅವಕಾಶ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕು. ಕ್ಷಣಿಕ ಸುಖಕ್ಕೆ ಆಸೆ ಪಡದೆ, ಶಾಶ್ವತವಾದ ಸುಖದ ಗಳಿಕೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಹಾಸನ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಆಲೂರು ಪಾಳೇಗಾರರ ಆಳ್ವಿಕೆಗೆ ಒಳಪಟ್ಟ ಐತಿಹಾಸಿಕ ಪ್ರದೇಶವಾಗಿದ್ದು, ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಮ್ಮೆ ಇರಬೇಕು. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಯಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಯಶಸ್ಸುಗೊಳಿಸುವ ಮೂಲಕ ಕಾಲೇಜು ಹಾಗೂ ಕ್ಷೇತ್ರದ ಘನತೆ ಹೆಚ್ಚಿಸಬೇಕು. ತಂದೆ-ತಾಯಿ ದುಡಿಮೆ, ಶ್ರಮ, ನಿಷ್ಠೆ, ತ್ಯಾಗ, ಆಕಾಂಕ್ಷೆಗಳು ಸದಾ ವಿದ್ಯಾರ್ಥಿಗಳ ಮನಸ್ಸಿನಲ್ಲಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಸಮಿತಿ ಸದಸ್ಯ ಸಿ.ಎನ್ ಬಾಲಕೃಷ್ಣ, ಪ್ರಾಧ್ಯಾಪಕರಾದ ಕೆ.ಎನ್. ರಮೇಶ್, ಜೆ.ಜಿ. ನಟರಾಜು, ಡಾ.ಪಿ.ಕೆ.ರಾಘವೇಂದ್ರ, ಅಧೀಕ್ಷಕ ರವಿಪ್ರಕಾಶ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಪುರುಷೋತ್ತಮ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ವೆಂಕಟೇಶ್ ಸೇರಿದಂತೆ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net