

ಹನೂರು: ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಸೃಜನಶೀಲತೆ ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ತಿಳಿಸಿದರು.
ಪಟ್ಟಣದ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ನಿರಂತರ ವಿದ್ಯಾರ್ಥಿಯಿದ್ದಂತೆ, ಕಲಿಕೆಯೇ ಬಂಡವಾಳ. ಇದರಲ್ಲಿ ನಿರಂತರತೆ ಕಾಯ್ದುಕೊಳ್ಳುವುದರಿಂದ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಸೃಜನಶೀಲತೆ ಮೂಡುತ್ತದೆ. ಕಲಿಕಾ-ಬೋಧನೆ ಸುಗಮವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಜ್ಞಾನವೂ ವೃದ್ಧಿಸುತ್ತದೆ. ಇದರಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳು ಸಹಕಾರಿಯಾಗಿದೆ. ಆದರೆ ಕೆಲವು ಶಿಕ್ಷಕರು ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಪಠ್ಯ ಬೋಧನೆಗೆ ಮಾತ್ರ ಸೀಮಿತವಾಗಿದ್ದು, ಸಹಪಠ್ಯ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳುವುದಿಲ್ಲ. ಇದರಿಂದ ಪ್ರತಿಭೆಗಳು ಪ್ರಯೋಜನಕ್ಕೆ ಬಾರದೇ ಸುಪ್ತವಾಗಿ ಅಡಗಿರುತ್ತದೆ. ಈ ದೆಸೆಯಲ್ಲಿ ಶಿಕ್ಷಕರಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಶಿಕ್ಷಕರ ಕಲ್ಯಾಣ ನಿಧಿಯಿಂದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯನ್ನು ಆಯೋಜಿಸಿರುವುದು ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇಚ್ಛಾಶಕ್ತಿಯಿಂದ ಭಾಗವಹಿಸಬೇಕು ಎಂದರು.
ಸಿಆರ್‌ಪಿ ಮಹೇಶ್ ಮಾತನಾಡಿ, ಸ್ಪರ್ಧೆಯಲ್ಲಿ ಭಾವಗೀತೆ, ಆಶುಭಾಷಣಾ, ಪ್ರಬಂಧ, ಸ್ಥಳದಲ್ಲೇ ಪಾಠೋಪಕರಣಗಳ ತಯಾರಿಕೆ, ರಸಪ್ರಶ್ನೆ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಆಯಾ ಸ್ಪರ್ಧೆಗಳಿಗೆ ನಿಯೋಜಿಸಲ್ಪಟ್ಟ ತೀಪುರ್ಗಾರರು ವಸ್ತುನಿಷ್ಠತೆ ಆಧಾರದ ಮೇಲೆ ತೀರ್ಪು ನೀಡುವುದರ ಮೂಲಕ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಅಶೋಕ್, ಬಿಆರ್‌ಸಿ ಚಂದ್ರುಶೇಖರ್ ಹಾಗೂ ವಿವಿಧ ಶಾಲೆಯ ಶಿಕ್ಷಕರು ಇದ್ದರು.