ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪಾಲ್ಗೊಳ್ಳಿ: ಡಾ. ವಾಸುದೇವ್ ಶರ್ಮಾ

univercity1
Published on

ಬೆಂಗಳೂರು: ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಬದ್ದತೆಯಿಂದ ಪಾಲ್ಗೊಳ್ಳಬೇಕು ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಡಾ. ವಾಸುದೇವ್ ಶರ್ಮಾ ಹೇಳಿದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಸಮಾಜಕಾರ್ಯ ವಿಭಾಗ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ಸಹಯೋಗದೊಂದಿಗೆ ಪ್ರಥಮ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗಾಗಿ ‘‘ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು’ಎಂಬ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕುರಿತು ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಅಕ್ಷರದವ್ವ ಮಾತೇ ಸಾವಿತ್ರಿ ಭಾಫುಲೆ ಅಂತಹ ಮಹನೀಯರನ್ನು ಸ್ಮರಿಸುವುದರೊಂದಿಗೆ ಸಮಾಜ ಕಾರ್ಯ ವೃತ್ತಿ ಶಿಕ್ಷಣ ಮತ್ತು ಸಿದ್ಧಾಂತಗಳನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಂಡು ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಬದ್ದತೆಯಿಂದ ಪಾಲ್ಗೊಳ್ಳಬೇಕು ಎಂದರು.
ಅಷ್ಟೇ ಅಲ್ಲದೆ ಮಕ್ಕಳ ಹಕ್ಕುಗಳ ಕುರಿತು ಅವರ ಹೋರಾಟ, ಸಂಶೋಧನೆ ಮತ್ತು ವಕೀಲಿತನದ ವಿವಿಧ ಆಯಾಮಗಳನ್ನು ತಿಳಿಸುತ್ತ ವಿದ್ಯಾರ್ಥಿಗಳು ಸಮಾಜಕಾರ್ಯ ವೃತ್ತಿಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕಿವಿಮಾತು ಹೇಳಿದರು.


ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕ ಡಾ.ವೇದ ಅವರು, ಸಮಾಜಕಾರ್ಯ ವಿಭಾಗದ ದ್ದೇಯೋದ್ದೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಬೌದ್ದಿಕ ಪ್ರಗತಿಯ ಉನ್ನತಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದ್ದು, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಬೇಕೆಂದು ತಿಳಿಸಿದರು.


ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂವಿಧಾನ ಬದ್ಧವಾಗಿ ಇರುವಂತ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವಿಕೆ ಹಕ್ಕುಗಳ ಕುರಿತಾಗಿ ಮೊದಲು ಮಕ್ಕಳಿಗೆ ಮತ್ತು ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಮನವರಿಕೆ ಮಾಡಿಕೊಟ್ಟು ಆ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ಭಾರತೀಯ ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಂಶವನ್ನು ವಿವಿಧ ಚಟುವಟಿಕೆಗಳ ಮೂಲಕ ಅರ್ಥೈಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಡಾ.ಚಂದ್ರಮೌಳಿ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net