ಸಂಗೀತದಿಂದ ಪ್ರೀತಿ ಕಾಣಲು ಸಾಧ್ಯ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅಭಿಮತ

Gandhibavana
Published on

ಮಂಡ್ಯ: ಸಂಗೀತವನ್ನು ಪ್ರೀತಿಸಿ ಆರಾಧಿಸುವ ವ್ಯಕ್ತಿಗೆ ಮಾತ್ರ ಈ ಜಗತ್ತನ್ನು ಪ್ರೀತಿಯಿಂದ ಕಾಣಲು ಸಾಧ್ಯ ಎಂದು ಸಾಹಿತಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಅಭಿಪ್ರಾಯಿಸಿದರು.

ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಗುಡ್ ವಾಯ್ಸ್ ಸಂಗೀತ ತರಬೇತಿ ಶಾಲೆಯ ವಾರ್ಷಿಕೋತ್ಸವ ಪ್ರತಿಭಾ ಪ್ರದರ್ಶನ, ಗಣ್ಯರಿಗೆ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಎಂದರೆ ಸಂಸ್ಕಾರ ಮತ್ತು ಸಂಯೋಜನೆ. ಎಲ್ಲಕ್ಕಿಂತ ಮುಖ್ಯವಾಗಿ ಇದೊಂದು ಸತ್ಸಂಗ. ಸಂಗೀತ ಯಾವೊಬ್ಬನ ಮನಸ್ಸಿನಲ್ಲಿ ತನ್ನ ಧನಿಯನ್ನು ಬೀರುತ್ತದೋ, ಆತ ಜಗತ್ತನ್ನು ಪ್ರೀತಿಸುತ್ತಾನೆ, ಆರಾಧಿಸುತ್ತಾನೆ ಎಂದು ಹೇಳಿದರು.

ಎಲ್ಲಿ ಸ್ವರ ಇರುತ್ತೋ ಅಲ್ಲಿ ವಾದ್ಯ ಇರುತ್ತದೆ. ಅಲ್ಲಿ ಜಗತ್ತನ್ನು ಪ್ರೀತಿಸುವ ಜನರಿರುತ್ತಾರೆ. ವಸಂತಕಾಲ ಎಂದರೆ ತುಂಬ ಸಿಹಿಯಾದ ಹಣ್ಣುಗಳ ಕಾಲ. ನಾವು ಹೋದಲೆಲ್ಲಾ ಸಿಹಿಯಾದ ಹಣ್ಣುಗಳು ಕಾಣುತ್ತವೆ. ಅದರಲ್ಲಿ ನಾವು ಒಳ್ಳೆಯ ಹಾಗೂ ಸಿಹಿಯಾದ ಹಣ್ಣನ್ನು ಆರಿಸಿ ತೆಗೆಯುತ್ತೇವೆ. ಇದೇ ರೀತಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮಕ್ಕಳನ್ನು ಅಂಕಗಳ ಆಧಾರದಲ್ಲಿ ಗುರುತಿಸುವುದು ಸರಿಯಲ್ಲ. ಇದರಿಂದ ಏನನ್ನೂ ಸಾಧಿಸಲಾಗದು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದಲ್ಲಿ ಮಾತ್ರ ಅವರು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಕೊಳಲು ನುಡಿಸುವವರನ್ನು ಕೇವಲ ಕೊಳಲು ವಾದರಕರೆಂದೇ ಹೇಳಲಾಗುತ್ತದೆ. ಅದನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಒಬ್ಬ ನುಡಿಗಾರ ಎಂದೇ ಗುರುತಿಸುವುದು ಅಗತ್ಯ. ಮಕ್ಕಳಿಗೆ ಸಂಗೀತದಲ್ಲಿ ಆಸಕ್ತಿ ಇದ್ದಲ್ಲಿ ಅವರನ್ನು ಸಂಗೀತ ಮಾರ್ಗದಲ್ಲೇ ಪ್ರೋತ್ಸಾಹಿಸಬೇಕು. ಸಂಗೀತ ಕಲಿತರೆ ಯಾವುದೇ ಹಣ ಬರುವುದಿಲ್ಲ ಎಂಬ ಭ್ರಮೆ ಬೇಡ. ಕೇವಲ ಹಣ ಸಂಪಾದನೆಗಾಗಿ ಸಂಗೀತ ಕಲಿಯುವುದು ತರವಲ್ಲ. ಸಂಗೀತದಿಂದ ಮನಸ್ಸು ಉಲ್ಲಾಸವಾಗುತ್ತದೆ. ಎಲ್ಲರನ್ನೂ ಪ್ರೀತಿಸುವ ಗುಣ ಅವರಲ್ಲಿ ತನ್ನಿಂದ ತಾನೇ ಬೆಳೆಯುತ್ತದೆ ಎಂದು ಹೇಳಿದರು.

ಶ್ರೆರಂಗಪಟ್ಟಣದ ಶಶಿಕುಮಾರ್, ಕೆಸ್ತೂರು ವೈದ್ಯ ಡಾ.ಉಮೇಶ್, ಕಲಾವಿದ ಜನಾರ್ಧನ ಕೊಂಡ್ಲಿ, ಸಿ.ದೇವರಾಜು, ಮಧುರ, ಸಿ.ದೇವರಾಜು ಇತರರಿದ್ದರು.

ಇದೇ ವೇಳೆ ಕೊಳಲು ವಾದಕ ಎನ್.ಎಸ್. ಮಣಿ, ರಂಗಭೂಮಿ ಕ್ಷೇತ್ರದ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯಕ ಸಿ.ಪಿ. ವಿದ್ಯಾಶಂಕರ್ ಮತ್ತು ಯುವ ಗಾಯಕ ಗಾಮನಹಳ್ಳಿಸ್ವಾಮಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net