ಪರ್ತಗಾಳಿ ಶ್ರೀಗಳ ವೃಂದಾವನ ಪ್ರವೇಶ

parthagali webb
Published on

ಗಂಗೊಳ್ಳಿ: ಗೋವಾದ ಕಾಣಕೋಣ ಸಮೀಪದ ಪರ್ತಗಾಳಿಯಲ್ಲಿರುವ ಮೂಲಮಠದಲ್ಲಿ ಪರಂಧಾಮಗೈದಿದ್ದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ವೃಂದಾವನ ಪ್ರವೇಶ ಕಾರ್ಯ ಶ್ರೀ ಮಠದ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖ ಗೌಡ ಸಾರಸ್ವತ ಸಮಾಜದ ಮಠ ಪರಂಪರೆಯಂತೆ ಸೋಮವಾರ ರಾತ್ರಿ ನೆರವೇರಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಗೋವಾದ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಸದಾ ಕ್ರಿಯಾಶೀಲರಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದ ಶ್ರೀಗಳಿಲ್ಲದೆ ಮಠದಲ್ಲಿ ಮೌನ ಆವರಿಸಿತ್ತು. ಮಠದ ಮೂಲೆಮೂಲೆಗಳಲ್ಲೂ ಶ್ರೀಗಳ ಗುಣಗಾನ, ಜೈಕಾರ ಕೇಳಿಬಂತು. ಸಾಗರೋಪಾದಿಯಲ್ಲಿ ಬರುತ್ತಿದ್ದ ಭಕ್ತ ಸಮೂಹವನ್ನು ನಿಯಂತ್ರಿಸುವುದು ಸವಾಲಾಗಿತ್ತು. ವೃಂದಾವನ ನಿರ್ಮಾಣ ಕಾರ್ಯಕ್ಕೆ ಭಕ್ತರು ಸಾಥ್ ನೀಡಿದರು. ಶ್ರೀಗಳಿಲ್ಲದ ಮಠವನ್ನು ನೆನೆಸಿಕೊಳ್ಳುವುದು ಕಷ್ಟ. ಸಮಾಜದ ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಸ್ಕಾರ ಬೆಳೆಸುವಲ್ಲಿ ಅವರ ಕೊಡುಗೆ ಸ್ಮರಿಸುತ್ತ ಕುಳಿತಿದ್ದ ಭಕ್ತರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಮಳೆಯನ್ನೂ ಲೆಕ್ಕಿಸದೆ ಮಠದ ಆವರಣದಲ್ಲಿ ನೆರೆದಿದ್ದ ಭಕ್ತರು ದಿಕ್ಕು ತೋಚದಂತಾಗಿ ನಾಮಸ್ಮರಣೆ, ಕೀರ್ತನೆಯಲ್ಲಿ ಮಗ್ನರಾಗಿದ್ದರು.

ವೃಂದಾವನ ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆಯೇ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಶ್ರೀಗಳ ವೃಂದಾವನ ಪ್ರವೇಶ ಕಾರ್ಯ ನಡೆಯಿತು. ಶ್ರೀಗಳ ಗುರುಗಳಾದ ಶ್ರೀಮದ್ ದ್ವಾರಕಾನಾಥ ತೀರ್ಥ ಸ್ವಾಮೀಜಿಯವರ ವೃಂದಾವನ ಸಮೀಪದಲ್ಲೇ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ವೃಂದಾವನ ನಿರ್ಮಿಸಲಾಗಿದೆ.

ಲವಲವಿಕೆಯಿಂದ ಇದ್ದ ಶ್ರೀಗಳು: ಶ್ರೀಗಳು ಭಾನುವಾರ ಎಂದಿನಂತೆ ಲವಲವಿಕೆಯಿಂದಲೇ ಇದ್ದರು. ದೈನಂದಿನ ಪೂಜಾ ಕೈಂಕರ್ಯ ಮುಗಿಸಿ, ಶಿಷ್ಯರಿಗೆ ಪಾಠ ಬೋಧಿಸಿದ್ದರು. ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೂ ಸೋಮವಾರ ಬೆಳಗ್ಗೆ ದಿನಚರಿ ಪೂರೈಸಿದ್ದರು. ನಿರ್ಮಾಲ್ಯ ವಿಸರ್ಜನೆಯನ್ನು ಶಿಷ್ಯ ಶ್ರೀಮದ್ ವಿದ್ಯಾಧೀಶ ಸ್ವಾಮೀಜಿಯವರ ಮೂಲಕ ನೆರವೇರಿಸಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿರುವಾಗ ಆಸ್ಪತ್ರೆಯಲ್ಲಿ ದೇಹತ್ಯಾಗ ಮಾಡಲು ಒಪ್ಪದ ಶ್ರೀಗಳು, ಏನೇ ಆಗುವುದಾದರೂ ಶ್ರೀಮಠದಲ್ಲೇ ಆಗಲಿ ಎಂದು ತಿಳಿಸಿದ್ದರು ಎಂಬುದಾಗಿ ಅವರ ನಿಕಟವರ್ತಿಗಳು ತಿಳಿಸಿದರು.

ಗಂಗೊಳ್ಳಿಯಲ್ಲಿ ನೀರವ ಮೌನ: ಪರ್ತಗಾಳಿ ಜೀವೋತ್ತಮ ಮಠಕ್ಕೆ ಇಬ್ಬರು ಯತಿಗಳನ್ನು ನೀಡಿದ ಗಂಗೊಳ್ಳಿಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಶ್ರೀಗಳು ಪರಂಧಾಮಗೈದ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಎಸ್‌ಬಿ ಸಮಾಜ ಬಾಂಧವರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಗೌರವ ನಮನ ಸಲ್ಲಿಸಿದರು. ಎಲ್ಲ ದೇವಸ್ಥಾನಗಳಲ್ಲಿ ಭಜನೆ, ಕೀರ್ತನೆ, ಸ್ತೋತ್ರ ಪಠಣ ನಡೆಯಿತು. ಶ್ರೀಗಳ ಪೂರ್ವಾಶ್ರಮದ ಮನೆಯಲ್ಲೂ ಮೌನ ಆವರಿಸಿತ್ತು. ಗಂಗೊಳ್ಳಿಯಲ್ಲಿ 2 ಬಾರಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದ ಶ್ರೀಗಳು, 2020ರಲ್ಲಿ ವಿದ್ಯಾಧಿರಾಜ ಸಭಾಗೃಹದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಮೊಕ್ಕಾಂ ಹೂಡಿದ್ದರು. ಪ್ರತಿವರ್ಷವೆಂಬಂತೆ ವಾರ್ಷಿಕ ಮನ್ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಶ್ರೀಗಳು ಮಠದ ಅಭಿವೃದ್ಧಿಗೆ ಸದಾ ಚಿಂತನೆ ನಡೆಸಿ ಭಕ್ತರಿಗೆ ಮಾರ್ಗದರ್ಶನ ಆಶೀರ್ವಾದ ನೀಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net