

ಬೆಂಗಳೂರು: ಬಿಬಿಎಂಪಿಯು ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಕೆಲಸ ಮುಂದುವರಿಸಿದ್ದು, ಆರ್.ಆರ್. ನಗರ ವಲಯದ ವಾಜರಹಳ್ಳಿಯಲ್ಲಿ ನಕ್ಷೆ ಮಂಜೂರಾತಿಗಿಂತ ಹೆಚ್ಚುವರಿಯಾಗಿ ಅನಧಿಕೃತವಾಗಿ ನಿರ್ಮಿಸಿದ್ದ 2 ಅಂತಸ್ತಿನ ಭಾಗವನ್ನು ಶನಿವಾರ ತೆರವು ಮಾಡಲಾಗಿದೆ.
ವಲಯ ಆಯುಕ್ತ ಬಿ.ಸಿ ಸತೀಶ್ ನೇತೃತ್ವದಲ್ಲಿ ಬಾಲಾಜಿ ಎಚ್‌ಬಿಸಿಎಸ್ ವಾಜರಹಳ್ಳಿಯಲ್ಲಿ ಸ್ವತ್ತಿನ ಸಂಖ್ಯೆ 271ರಲ್ಲಿ ಕಟ್ಟಡ ಮಾಲೀಕ ಬಿ.ಮದನ್ ದೇವಾಸಿ ಮತ್ತು ಮಹೇಂದ್ರ ದೇವಾಸಿ ಅವರು 30/ 40 ಅಡಿ ಸೈಟ್‌ನಲ್ಲಿ ಪಾಲಿಕೆಯಿಂದ ಪಡೆದಿರುವ ನಕ್ಷೆ ಮಂಜೂರಾತಿ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ತಳಮಹಡಿ, ನೆಲಮಹಡಿ ಹಾಗೂ ಎರಡು ಮಹಡಿಗೆ ಮಂಜೂರಾತಿ ಪಡೆದು ಹೆಚ್ಚುವರಿಯಾಗಿ ಇನ್ನೆರಡು ಅಂತಸ್ತುಗಳನ್ನು ನಿರ್ಮಿಸಿದ್ದರು. ನಿಯಮ ಉಲ್ಲಂಸಿರುವುದು ದೃಢಪಟ್ಟ ಕಾರಣ 4 ಬಾರಿ ನೋಟಿಸ್ ಜಾರಿ ಮಾಡಿದರೂ, ಕಟ್ಟಡ ಮಾಲೀಕರು ಸ್ಪಂದಿಸದ ಕಾರಣ ಹೆಚ್ಚುವರಿ ಭಾಗವನ್ನು ತೆರವುಗೊಳಿಸಲಾಗಗಿದೆ. ಇದಕ್ಕಾಗಿ ಪೊಲೀಸ್ ಭದ್ರತೆ ಪಡೆಯಲಾಗಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ವಲಯ ಜಂಟಿ ಆಯುಕ್ತ ಅಜಯ್, ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕಿ ಆರತಿ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.