ಈಗ ಕಾಂಗ್ರೆಸ್ ಸೇರಲ್ಲ, ಲೋಕಸಭೆಗೆ ಸ್ಪರ್ಧಿಸುವುದಿಲ್ಲ

MUNENAKOPPA NEWWW
Published on

ಹುಬ್ಬಳ್ಳಿ : ಕಾಂಗ್ರೆಸ್​ನ ಯಾವೊಬ್ಬ ಮುಖಂಡರೂ ಆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ. ಸಧ್ಯಕ್ಕೆ ಬಿಜೆಪಿಯಲ್ಲಿಯೇ ಇದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಮಹಾತ್ವಾಕಾಂಕ್ಷೆ ಇಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರೂ, ನನ್ನ ಮುಂದಿನ ರಾಜಕೀಯ ನಿರ್ಧಾರವನ್ನು ಕ್ಷೇತ್ರದ ಪ್ರಮುಖರೊಂದಿಗೆ ರ್ಚಚಿಸಿ ಜನವರಿಗೆ ಬಹಿರಂಗಪಡಿಸುತ್ತೇನೆ ಎನ್ನುವ ಮೂಲಕ ಗೊಂದಲ ಹಾಗೆ ಉಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಂತೂ ಬಿಜೆಪಿಯಲ್ಲಿಯೇ ಇದ್ದೇನೆ. ಇಂದಿನ ಸ್ಥಿತಿ ನಾಳೆಯೋ ಅಥವಾ ಬೇರೆ ದಿನವೋ ಇರುವುದಿಲ್ಲ ಎನ್ನುವ ಮೂಲಕ ಬಿಜೆಪಿಯಲ್ಲಿ ಮುಂದುವರಿಯುವ ಬಗ್ಗೆ ಸ್ಪಷ್ಟಪಡಿಸದಾದರು. ಕೌಟುಂಬಿಕ ಸಮಸ್ಯೆಯಿಂದಾಗಿ ಸಧ್ಯಕ್ಕೆ ಸಾರ್ವಜನಿಕ ಜೀವನದಲ್ಲಿ ಕಾಣಿಸುತ್ತಿಲ್ಲ. ನವೆಂಬರ್ ನಂತರ ಮತ್ತೆ ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದರು.

ಬಿಜೆಪಿಯಲ್ಲಿನ ಆಗುಹೋಗುಗಳ ಬಗ್ಗೆ ಸ್ವಲ್ಪಮಟ್ಟಿನ ಅಸಮಾಧಾನ ಇರುವುದು ನಿಜ. ಪಕ್ಷ ಅಧಿಕಾರದಲ್ಲಿ ಇದ್ದಾಗ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಲಿಲ್ಲ. ನಿಗಮ, ಮಂಡಳಿಗಳಿಗೆ ಆದ್ಯತೆ ನೀಡಲಿಲ್ಲ. ಇದರಿಂದಾಗಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ಬಿಟ್ಟು ಹೋದರು. ಮೋಹನ ಲಿಂಬಿಕಾಯಿ, ಎಸ್.ಐ. ಚಿಕ್ಕನಗೌಡ್ರ ಸಹ ಬಿಜೆಪಿಯಿಂದ ದೂರವಾದರು. ನಾನು ಬಿಜೆಪಿಯಲ್ಲಿ ಬೆಳೆಯಲು ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರಂತಹ ನಾಯಕರ ಪಾತ್ರ ಬಹಳ ಇದೆ. ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಇದ್ದಿದ್ದರೆ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದರು.

ತಪ್ಪಾಗುವುದನ್ನು ಜೋಶಿ ತಡೆಯಲಿ : ಕೆಲ ದಿನಗಳ ಹಿಂದಷ್ಟೇ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ ಸಮಾರಂಭಕ್ಕೂ ಮಾಜಿ ಶಾಸಕರನ್ನು ಆಹ್ವಾನಿಸಲಿಲ್ಲ. ಈ ರೀತಿಯ ಕಡೆಗಣನೆ ಸರಿ ಅಲ್ಲ ಎಂದ ಮುನೇನಕೊಪ್ಪ. ಈ ಹಿಂದೆ ಜಗದೀಶ ಶೆಟ್ಟರ್ ಹಾಗೂ ಪ್ರಲ್ಹಾದ ಜೋಶಿ ಅವರು ಧಾರವಾಡ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಬದಲಾದ ರಾಜಕೀಯದಿಂದಾಗಿ ಪ್ರಲ್ಹಾದ ಜೋಶಿ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸಿಕೊಂಡು, ಸಂಘಟನೆ ಮಾಡಬೇಕಾದ ಜವಾಬ್ದಾರಿ ಅವರ ಮೇಲಿದೆ. ಈ ಹಿಂದೆ ಆಗಿರುವ ತಪು್ಪಗಳು ಮರುಕಳಿಸದಂತೆ ಜೋಶಿ ಅವರು ನೋಡಿಕೊಳ್ಳಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net