ರಾಜ್ಯ ಸರ್ಕಾರದ ಮೇಲೆ ಲೋಕಸಭೆ ಚುನಾವಣೆ ಪರಿಣಾಮ

BASAVARAJ BOMMAYI
Published on

ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸದಿದ್ದರೆ ಅದರ ಪರಿಣಾಮ ನೇರವಾಗಿ ರಾಜ್ಯ ಸರ್ಕಾರದ ಮೇಲೆ ಬೀರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೇ ಕಾರಣಕ್ಕಾಗಿ ಕಾಂಗ್ರೆಸ್​ನವರು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಆದರೆ, ಅವರ ಆಪರೇಷನ್ ಯಶಸ್ಸು ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆ ಕಾಂಗ್ರೆಸ್​ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ, ಕಾಂಗ್ರೆಸ್​ನವರು ಆತಂಕಗೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಬರಗಾಲ ತಲೆದೋರಿದೆ. ಮುಂಗಾರು ಕೈಕೊಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬಿತ್ತಿದ ಬೆಳೆ ಕೈಗೆ ಬಾರದಂತಾಗಿದೆ. ಆದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಣೆ ಮಾಡಿಲ್ಲ. ಜಲಾಶಯಗಳಲ್ಲಿ ಕಡಿಮೆ ನೀರಿನ ಪ್ರಮಾಣದಿಂದಾಗಿ ವಿದ್ಯುತ್ ಉತ್ಪಾದನೆಯೂ ಕುಂಠಿತಗೊಂಡಿದೆ ಎಂದು ಹೇಳಿದರು.

ಇಷ್ಟೆಲ್ಲ ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ತಕ್ಷಣ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು. ಆದರೆ, ಸರ್ಕಾರ ಇದರ ಬಗ್ಗೆ ಗಮನ ನೀಡುತ್ತಿಲ್ಲ. ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ವರ್ಗಾವಣೆ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ಮಾತನಾಡುವವರ ಧ್ವನಿ ದಮನ ಮಾಡಲಾಗುತ್ತಿದೆ. ಶಾಸಕರ ಪತ್ರಗಳನ್ನು ಬಹಿರಂಗಪಡಿಸಿದ ಪತ್ರಕರ್ತರಿಗೆ ನೋಟಿಸ್ ನೀಡಲಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ ದಮನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net