

ಹುಲಸೂರು: ವಿವಿಧ ತರಗತಿಗಳ ವಿದ್ಯಾರ್ಥಿಗಳು ಮತದಾನ ಮಾಡುವುದರಲ್ಲಿ ತಲ್ಲೀನ , ನಮ್ಮನ್ನು ಆಯ್ಕೆ ಮಾಡುವಂತೆ ದುಂಬಾಲು ಬೀಳುತ್ತಿರುವ ಅಭ್ಯರ್ಥಿಗಳು , ಚುನಾವಣೆ ನಿಯಮ ಅನುಸಾರ ನಡೆಯುತ್ತಿರುವ ಮತದಾನದಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿ ಸಂತಸ ಪಟ್ಟ ವಿದ್ಯಾರ್ಥಿಗಳು.
ಹೌದು ವಿಧಾನಸಭೆ ಹಾಗೂ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯುವ ಪದ್ಧತಿಯಂತೆ ಯಾವುದೇ ನಿಯಮವನ್ನು ಉಲ್ಲಂಘಿಸದೆ ೨೦೨೪-೨೫ ನೇ ಸಾಲಿನ ಶಾಲಾ ಸಂಸತ್ ಸದಸ್ಯರ ಚುನಾವಣೆಯನ್ನು ಶನಿವಾರ ಸಮೀಪದ ಬೇಟಬಾಲಕುಂದಾ ಗ್ರಾಮದ ಮುರಾರ್ಜಿ ವಸತಿ ಶಾಲೆಯ ಶಿಕ್ಷಕರು ಅಚ್ಚುಕಟ್ಟಾಗಿ ನಡೆಸುತ್ತಿರುವುದು ಕಂಡುಬಂತು.
೬ ರಿಂದ ೧೦ನೇ ತರಗತಿವರೆಗೆ ಪ್ರತಿ ತರಗತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪದ್ಧತಿಯನ್ನು ಇಟ್ಟುಕೊಂಡು ಪ್ರತಿ ತರಗತಿಯ ಒಂದು ಮತಗಟ್ಟೆಯನ್ನು ಸಿದ್ಧಪಡಿಸಿ ಮತಯಂತ್ರದ ಪದ್ಧತಿಯಂತೆ ಮೊಬೈಲ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು.
ಒಟ್ಟು ೪೯ ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ ಎಣಿಕೆ ಪ್ರಾರಂಭಿಸಿ ೧೭ ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಮೂಲಕ ಭರ್ಜರಿ ಮತದಾನಕ್ಕೆ ನಾಂದಿ ಹಾಡಿದರು. ಫಲಿತಾಂಶ ಬರುತ್ತಿದ್ದಂತೆ ಅಭ್ಯರ್ಥಿಗಳು ಸಂತಸ ಪಟ್ಟು ಕುಣಿದು ಕುಪ್ಪಳಿಸಿದರು.
೬ನೇ ತರಗತಿಯ ಭಾಗ್ಯಲಕ್ಷ್ಮೀ, ಮಲ್ಲಿಕಾರ್ಜುನ, ಪೃಥ್ವಿರಾಜ, ೭ನೇ ತರಗತಿಯ ಯೋಗೇಶ, ವೈಷ್ಣವಿ, ತ್ರಿವೇಣಿ, ಗಜಾಲಾ ಬೇಗಂ, ೮ನೇ ತರಗತಿಯ ವೈಷ್ಣವಿ, ಭಗವಂತ, ಶುಧಿಕಾ, ೯ನೇ ತರಗತಿಯ ನೇಹಾ, ಅಭಿಷೇಕ, ಪ್ರೀತಿ ಹಾಗೂ ೧೦ನೇ ತರಗತಿಯ ಮಹೇಶ, ಶ್ರೀಧರ, ಜ್ಯೋತಿ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಾಂಶುಪಾಲ ಸಂಜಯ ರೋಹಿಲೆ ಚುನಾವಣಾ ಅಧಿಕಾರಿಯಾಗಿದ್ದರು. ನಿಲಯ ಪಾಲಕ ಬಸಪ್ಪ ಕಾಂಬಳೆ , ಶಿಕ್ಷಕರಾದ ಗೌತಮ ಗಾಯಕವಾಡ , ನಾಗರಾಜ ನಾಟೀಕರ, ದುಶಾಂತ ಜಾಧವ, ಉಮೇಶ ಜಮಾದಾರ, ಶಿವರಾಜ ವಗ್ಗೆ , ಚಂದ್ರಕಾಂತ ಪಾವಡಶೆಟ್ಟಿ , ವೈಶಾಲಾ, ಸಂಗೀತಾ ಮಠಪತಿ, ರೇಷ್ಮಾ ಬಿರಾದಾರ, ಸುಜಾತಾ ರಾಮಪುರೆ, ಅನುಪಕುಮಾರ ಗಾಯಕವಾಡ , ಶರಣು ಪೋಸ್ತೆ , ಶಿವಾನಂದ ಕಮಲಾಪುರೆ , ಮಹಾಂತಪ್ಪ ಪಾಟೀಲ್, ದಿಗಂಬರ ಬೊಕ್ಕೆ , ಸವಿತಾ ಕಾಂಗೆ, ಶಾಂತಾ ಬಾಯಿ, ಶಾಲು, ಜಯಶ್ರೀ ಇದ್ದರು.