

ಬಾಗಲಕೋಟೆ: ಸಂಸತ್ ಭವನದ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಹಳದಿ ಬಣ್ಣದ ಹೊಗೆ ಎಬ್ಬಿಸಿದ್ದ ಪ್ರಕರಣದಲ್ಲಿ ನಗರದ ಟೆಕ್ಕಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಮೈಸೂರಿನ ಮನೋರಂಜನ್ ಜತೆಗೆ ನಂಟು ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿವೃತ್ತ ಡಿವೈಎಸ್ಪಿ ವಿಠ್ಠಲ ಜಗಲಿ ಪುತ್ರ ಸಾಯಿಕೃಷ್ಣ ಎಂಬುವರನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಬುಧವಾರ ರಾತ್ರಿ ದೆಹಲಿಗೆ ಕರೆದೊಯ್ದಿದ್ದಾರೆ.
ವಿದ್ಯಾಗಿರಿಯ ಮನೆಯಲ್ಲಿದ್ದ ಸಾಯಿಕೃಷ್ಣನನ್ನು ನವನಗರ ಠಾಣೆಯಲ್ಲಿ ಕೆಲಕಾಲ ವಿಚಾರಣೆ ನಡೆಸಲಾಯಿತು. ಮನೋರಂಜನ್ ಈತನ ಸ್ನೇಹಿತನಾಗಿದ್ದು, ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿ ಆಗಿದ್ದ. 2008-09ರಲ್ಲಿ ಇಬ್ಬರೂ ರೂಮ್ೆುಟ್ ಸಹ ಆಗಿದ್ದರು ಎಂದು ಹೇಳಲಾಗುತ್ತಿದೆ.
2012ರಲ್ಲಿ ಸಾಯಿಕೃಷ್ಣ ಸಹ ದೆಹಲಿಗೆ ಹೋಗಿದ್ದ. ಸದ್ಯ ಖಾಸಗಿ ಕಂಪನಿಯಲ್ಲಿ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಸಾಯಿಕೃಷ್ಣ ಮನೆಯಿಂದಲೇ ಕೆಲಸ ಮಾಡುತ್ತಿದ್ದ.
ಮನೋರಂಜನ್ ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆದಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಾಗಲಕೋಟೆಗೆ ಆಗಮಿಸಿದ್ದರು. ಬುಧವಾರ ಸಂಜೆ 7 ಗಂಟೆಗೆ ನಗರಕ್ಕೆ ಆಗಮಿಸಿದ್ದ ದೆಹಲಿ ಕಮೀಷನರೇಟ್ ಪೊಲೀಸರು ವಿದ್ಯಾಗಿರಿಯ ಮನೆಗೆ ತೆರಳಿದ್ದರು. ಈ ಬಗ್ಗೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರಿಗೆ ಮಾಹಿತಿ ನೀಡಿ, ನವನಗರದ ಪೊಲೀಸ್ ಠಾಣೆಯಲ್ಲಿ ಕೆಲ ಕಾಲ ವಿಚಾರಣೆ ನಡೆಸಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
ಮನೋರಂಜನ್ ಸ್ನೇಹಿತ ಆಗಿರುವ ಸಾಯಿಕೃಷ್ಣ ಅವರ ಪಾತ್ರ ಇದರಲ್ಲಿ ಏನು? ಎನ್ನುವುದು ಸೇರಿದಂತೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದೆ. ದೆಹಲಿಯ ಪಿಎಸ್ಐ ಪಿಂಟು ಶರ್ಮಾ ನೇತೃತ್ವದಲ್ಲಿ ನಾಲ್ವರ ತಂಡ ಬಾಗಲಕೋಟೆಗೆ ಆಗಮಿಸಿತ್ತು.
ಬಾಗಲಕೋಟೆಯ ವಿದ್ಯಾಗಿರಿಯ ಮನೆಯಲ್ಲಿ ಇದ್ದ ಸಾಯಿಕೃಷ್ಣ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಆದರೆ, ನಮಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
| ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ.
ನಮ್ಮ ಸಹೋದರ ಯಾವುದೇ ತಪ್ಪು ಮಾಡಿಲ್ಲ. ಆತ ಮನೋರಂಜನ್ ಸ್ನೇಹಿತ ಮಾತ್ರ. ಫ್ರೆಂಡ್ ಆಗಿರುವ ಕಾರಣಕ್ಕೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಎಲ್ಲ ತನಿಖೆಗೂ ನಾವು ಸಿದ್ಧರಿದ್ದೇವೆ. ತಪ್ಪೇ ಮಾಡಿಲ್ಲ ಅಂದರೆ ಹೆದರೋದ್ಯಾಕೆ? ಎರಡು ದಿನದಿಂದ ದೆಹಲಿ ಪೊಲೀಸರು ಬಂದು ವಿಚಾರಣೆ ನಡೆಸಿದ್ದಾರೆ. ಎಲ್ಲದ್ದಕ್ಕೂ ಸಹಕರಿಸಿದ್ದೇವೆ.
| ಸ್ಪಂದನಾ ಜಗಲಿ, ಸಾಯಿಕೃಷ್ಣ ಸಹೋದರಿ