

ಉಡುಪಿ: ಪ್ರಕೃತಿಯಲ್ಲಿ ಮತ್ತು ಕಲಾ ಪ್ರಕಾರಗಳಲ್ಲಿ ನಮ್ಮ ಹಿರಿಯರು ಭಗವಂತನ ಅನುಸಂಧಾನ ಕಂಡುಕೊಂಡಿದ್ದಾರೆ. ಸನಾತನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಪರ್ಕಳದ ಸರಿಗಮ ಭಾರತಿ ಏರ್ಪಡಿಸಿದ ವಿಜಯದಶಮಿ ಉತ್ಸವ ಉದ್ಘಾಟಿಸಿ ಮಾತನಾಡಿದರು. ಇಂದಿನ ಒತ್ತಡದ ಬದುಕಿನ ಮಧ್ಯೆ ಎಲ್ಲರದ್ದು ಆನಂದದ ಹುಡುಕಾಟ ನಡೆಯುತ್ತಿದೆ. ಸಮಾಜ ಇಂದು ಕವಲು ದಾರಿಯಲ್ಲಿದೆ. ಕ್ಷಣಿಕ ಆಕರ್ಷಣೆ ನಮ್ಮ ಮಕ್ಕಳನ್ನು ದಿಕ್ಕು ಕೆಡಿಸುವ ಅಪಾಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಬಹಳಷ್ಟು ಮಕ್ಕಳಿಗೆ ಮನೆಯಿಂದ ಬೇಕಾದ ಸಂಸ್ಕಾರ ಸಿಗುತ್ತಿಲ್ಲ. ಹೀಗಾಗಿ ಹೆಚ್ಚಿನ ಮಕ್ಕಳ ಕೈಗಳಲ್ಲಿ ಮೊಬೈಲುಗಳೇ ಕಾಣಿಸುತ್ತಿವೆ. ಸರಿಗಮ ಭಾರತಿ ಈ ನಿಟ್ಟಿನಲ್ಲಿ ನಮಗೊಂದು ದೀಪ. ಸಂಸ್ಕಾರದ ಬಾಗಿಲು ತೆರೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಇಂಥ ಸಂಸ್ಥೆಗಳು ಇನ್ನಷ್ಟು ಹೆಚ್ಚಲಿ. ನಮ್ಮ ಮಕ್ಕಳ ಬದುಕು ಹಸನಾಗಲಿ ಎಂದು ಅವರು ಹೇಳಿದರು.
ಉದ್ಯಮಿ ಮಂಜುನಾಥ ಉಪಾಧ್ಯಾಯ ಮಾತನಾಡಿದರು. ಬಹುಮುಖ ಪ್ರತಿಭೆಯ ಆಪ್ತ ಸಮಾಲೋಚಕಿ ಶಿಲ್ಪಾ ಜೋಶಿ ಮತ್ತು ನಟಿ ಮಾನಸಿ ಸುಧೀರ್ ಇವರನ್ನು ಸಮ್ಮಾನಿಸಲಾಯಿತು. ಸರಿಗಮ ಭಾರತಿಯ ಉದಯ ಶಂಕರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಸರಿಗಮ ಭಾರತಿ ಗುರು ಉಮಾಶಂಕರಿ ವಂದಿಸಿದರು. ಶಕುಂತಲಾ ಪ್ರಾರ್ಥನೆಗೈದರು. ಡಾ. ರಾಘವೇಂದ್ರ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.
ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಅವರ ಹಿಂದುಸ್ತಾನಿ ಗಾಯನ, ವಿದುಷಿ ಸುರೇಖಾ ಭಟ್ ಅವರಿಂದ ಕರ್ನಾಟಕ ಸಂಗೀತ ಕಚೇರಿ, ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳ ಪ್ರಸ್ತುತಿ ನಡೆಯಿತು. ತನ್ಮಯಿ ಉಪ್ಪಂಗಳ ಅವರ ಸಂಗೀತ ಕಚೆೇರಿ ನಡೆಯಿತು. ವಿದ್ಯಾಲಯದ ಮಕ್ಕಳಿಂದ ಕೃತಿಗಳ ಪ್ರಸ್ತುತಿ ಹಾಗೂ ಕಲಾವಿದರಿಂದ ತ್ಯಾಗರಾಜರ ಘನಪಂಚರತ್ನ ಗೋಷ್ಠಿ ಗಾಯನ ನಡೆಯಿತು. ಮಂಗಳೂರಿನ ನೃತ್ಯಾಂಗನ್ ಅದಿತಿ ಲಕ್ಷಿ$್ಮ ಭಟ್ ಹಾಗೂ ಪುತ್ತೂರಿನ ದೀಪಕ್ ಕುಮಾರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.