

ಉಡುಪಿ: ಪರ್ಕಳ ಈಶ್ವರನಗರ ರಸ್ತೆ ಕಾಮಗಾರಿ 2018ರಲ್ಲಿ ಪ್ರಾರಂಭವಾಗಿದ್ದು, 24 ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಪಂಚವಾರ್ಷಿಕ ಯೋಜನೆಯಾಗಿ ಮುಂದುವರೆದಿದೆ. ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. 15 ದಿನದೊಳಗೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎ.ವಿ ಬಾಳಿಗಾ ಆಸ್ಪತ್ರೆ ಆಡಳಿತ ನಿರ್ದೇಶಕ, ಮನೋವೈದ್ಯ ಡಾ. ಪಿ. ವಿ. ಭಂಡಾರಿ ಎಚ್ಚರಿಸಿದ್ದಾರೆ.
ಭಾನುವಾರ ಕೆಳ ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸಮಾನಮನಸ್ಕ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪರ್ಕಳ ರಾ.ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ಟ್ರಾಫಿಕ್ ಜಾಮ್ ಗೆ ಮುಕ್ತಿ ನೀಡುವುಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ ಅವರು, ನಗರಸಭೆ, ವಿಧಾನಸಭೆ, ಲೋಕಸಭೆಯಲ್ಲಿ ಬಿಜೆಪಿಯವರೇ ಇರುವುದರಿಂದ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಹಮದ್ ಅನ್ಸರ್, ಡಾ. ಸುಲತಾ ಭಂಡಾರಿ, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.