ಪಾರ್ಕ್‌ಗೆ ವಿದ್ಯಾರ್ಥಿಗಳ ಪ್ರವೇಶ ನಿಷೇಧ ; ಮಹಾನಗರ ಪಾಲಿಕೆಯಿಂದ ದಿಢೀರ್ ನಿರ್ಧಾರ ; ಸಾರ್ವಜನಿಕರಿಂದ ಭಾರಿ ವಿರೋಧ

19TMK_Palike_Park_Spl
Published on

ತುಮಕೂರು : ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಉದ್ಯಾನವನಕ್ಕೆ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸುವಂತಹ ವಿವಾದಾತ್ಮಕ ಕ್ರಮವನ್ನು ಪಾಲಿಕೆಯು ದಿಢೀರನೆ ಕೈಗೊಂಡಿರುವುದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದೆ.

ಪಾಲಿಕೆ ಕಚೇರಿ ಆವರಣದಲ್ಲಿಯೇ ಉದ್ಯಾನವನವಿದ್ದು, ಅದನ್ನು ಇತ್ತೀಚೆಗಷ್ಟೇ ಅಭಿವೃದ್ಧಿಪಡಿ ಕಾವಲುಗಾರನನ್ನೂ ನಿಯೋಜಿಸಲಾಗಿದೆ. ಪ್ರತಿನಿತ್ಯ ನೂರಾರು ಜನ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಹಳ್ಳಿಗಳಿಂದ ತುಮಕೂರಿಗೆ ಬರುವವರೂ ಕೆಲವೊಮ್ಮೆ ಮನೆಯಿಂದ ತಂದ ಊಟ ತಿಂದು ನಿರ್ಗಮಿಸುತ್ತಾರೆ. ಕೆಲ ವಿದ್ಯಾರ್ಥಿಗಳು ಓದುತ್ತಲೂ ಇರುತ್ತಾರೆ. ಆದರೆ, ಇದೀಗ ಪಾಲಿಕೆ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಿರುವುದು ಪ್ರಜ್ಞಾವಂತರ ವಲಯದಲ್ಲಿ ಟೀಕೆಗೊಳಗಾಗಿದೆ.

ನಗರದ ಬಿಜಿಎಸ್ ವೃತ್ತದ ಕಡೆಯಿಂದ ಪಾಲಿಕೆ ಕಚೇರಿಗೆ ಬರುವ ಪ್ರವೇಶ ದ್ವಾರದ ಎರಡೂ ಕಡೆ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿರುವ ಸೂಚನಾ ಪತ್ರ ಅಂಟಿಸಲಾಗಿದೆ. ಅದೇ ರೀತಿ ಉದ್ಯಾನ ಪ್ರವೇಶದ ಗೇಟ್‌ನಲ್ಲೂ ನಿಷೇಧದ ಸೂಚನಾ ಪತ್ರ ಅಳವಡಿಸಲಾಗಿದ್ದು ಆಶ್ಚರ್ಯ ಮೂಡಿಸಿದೆ.

ಪಾಲಿಕೆ ಆಡಳಿತವು ಪಾರ್ಕ್ ನಿರ್ವಹಣೆ ಸಾಧ್ಯವಾಗದೆ ಪ್ರವೇಶ ನಿಷೇಧಿಸಿರುವ ಕ್ರಮ ಚರ್ಚಾಸ್ಪದವಾಗಿದೆ. ಇದಲ್ಲದೆ ಪಾಲಿಕೆ ಕಚೇರಿಯ ಎರಡೂ ಬದಿ ಉದ್ದಕ್ಕೂ ನೂರಾರು ದ್ವಿಚಕ್ರ ವಾಹನಗಳು ದಿನವಿಡೀ ನಿಲುಗಡೆ ಆಗುತ್ತವೆ, ಇವರು ಪಾಲಿಕೆ ಕಚೇರಿಗೆ ಅಥವಾ ಕೃಷ್ಣರಾಜೇಂದ್ರ ಪುರಭವನದಲ್ಲಿರುವ ಶಾಸಕರ ಕಚೇರಿಗೆ ಬರುವವರಲ್ಲ. ಆದರೂ, ಇಲ್ಲಿ ದಿನವಿಡೀ ವಾಹನಗಳು ನಿಲುಗಡೆ ಆಗಿರುತ್ತವೆ. ಈ ಬಗ್ಗೆ ಪಾಲಿಕೆ ನಿರ್ಲಕ್ಷಿಸುತ್ತದೆ. ಆದರೆ, ಅಮಾಯಕ ವಿದ್ಯಾರ್ಥಿಗಳು ಇಲ್ಲಿಗೆ ಬರುವುದನ್ನು ನಿಷೇಧಿಸುವುದು ಹಾಸ್ಯಾಸ್ಪದ ಎನಿಸಿದೆ.

ಯಾರಿಗಾಗಿ ಈ ಉದ್ಯಾನ? : ಪಾಲಿಕೆಯ ಈ ನಿರ್ಧಾರದಿಂದ ಉದ್ಯಾನವನ ಯಾರಿಗಾಗಿ ಎಂಬ ಪ್ರಶ್ನೆ ಎದುರಾಗಿದೆ. ಉದ್ಯಾನವು ಕಾಫಿ, ಟೀ ಕುಡಿಯುವವರ ಹಾಗೂ ತಿಂಡಿ-ಊಟ ಮಾಡುವವರಿಗಷ್ಟೇ ಎಂಬಂತಾಗಿದೆ, ಉದ್ಯಾನಕ್ಕೆ ಹೊಂದಿಕೊಂಡಂತೆ ಹೊರಭಾಗದ ಫುಟ್‌ಪಾತ್‌ನಲ್ಲಿ ತಿಂಡಿ ಅಂಗಡಿಗಳು, ಟೀ ಅಂಗಡಿಗಳು ಇವೆ. ಇವುಗಳ ವ್ಯಾಪಾರ ನಡೆಯುವುದು ಈ ಉದ್ಯಾನದಲ್ಲಿ. ಈ ಉದ್ಯಾನದ ಒಳಗೆ ಕುಳಿತುಕೊಂಡೇ ಜನರು ತಿಂಡಿ-ಟೀ-ಕಾಫಿ ಸೇವಿಸುತ್ತಾರೆ. ಇದಕ್ಕಾಗಿ ಪಾಲಿಕೆ ಅಧಿಕಾರಿಗಳಿಗೂ ಮಾಮೂಲಿ ಸಂದಾಯವಾಗುತ್ತಿದೆ ಎಂಬ ದೂರಿದೆ. ಹೋಟೆಲ್ ಗ್ರಾಹಕರು ಇಲ್ಲಿಯೇ ಊಟ ಮಾಡಿ, ಕಾಫಿ ಕುಡಿಯುವುದರಿಂದ ಉದ್ಯಾನವು ಗಲೀಜಾಗುತ್ತಿದ್ದರೂ ಮಹಾನಗರ ಪಾಲಿಕೆ ನಿರ್ಲಕ್ಷಿಸಿದೆ. ಕೋಟ್ಯಂತರ ರೂ.ವಿನಿಯೋಗಿಸಿ ಉದ್ಯಾನವನ ಅಭಿವೃದ್ಧಿಪಡಿಸಿರುವುದು ಇದಕ್ಕಾಗಿಯೇ? ಎಂಬ ಟೀಕೆ ಕೇಳಿಬಂದಿದೆ.

ಉದ್ಯಾನಕ್ಕೆ ಎಲ್ಲರಿಗೂ ಪ್ರವೇಶಕ್ಕೆ ಅಕಾಶವಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ, ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ ಎಂಬ ಫಲಕ ಹಾಕಿರುವುದು ಗಮನಕ್ಕೆ ಬಂದಿಲ್ಲ, ಕೂಡಲೇ ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿ ಮಾಹಿತಿ ಪಡೆಯುತ್ತೇನೆ. ರೇಣುಕಾ, ಪಾಲಿಕೆ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net