ಪಾರ್ಕ್‌ಗಳ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲು ; ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಹಿತಿ ; ಉದ್ಯಾನವನ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ

31Tmk_Palike_park
Published on

ತುಮಕೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ಅಭಿವೃದ್ಧಿಗಾಗಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ರಾಜ್ಯ ಜೀವ ವೈವಿಧ್ಯ ನಿರ್ವಹಣಾ ಸಮಿತಿ, ಜಿಲ್ಲಾಡಳಿತ, ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಮಾರ್ಟ್‌ಸಿಟಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯಾನವನಗಳ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ಮಾರ್ಟ್‌ಸಿಟಿ ವತಿಯಿಂದ 53, ಪಾಲಿಕೆಯಿಂದ 50 ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ 13 ಪಾರ್ಕ್‌ಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಾನವನಗಳ ಅಭಿವೃದ್ಧಿಗೆ 60 ರಿಂದ 70 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದರು.

ಪಾರ್ಕ್‌ಗಳ ಪತ್ತೆಗೆ ಕ್ರಮ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಣ್ಮರೆಯಾಗಿರುವ ಉದ್ಯಾನವನಗಳ ಪತ್ತೆಹಚ್ಚುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಒತ್ತುವರಿ ಮಾಡಲಾಗಿರುವ ಪಾರ್ಕ್‌ಗಳನ್ನು ಈವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಒತ್ತುವರಿ ತೆರವುಗೊಳಿಸಲು ಯಾರೂ ಪ್ರಯತ್ನಿಸುತ್ತಿಲ್ಲ. ಇದರ ಜತೆಗೆ ರಾಜಕಾಲುವೆ ಕಬಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ 1ನೇ ವಾರ್ಡ್‌ನಿಂದ 29ನೇ ವಾರ್ಡ್‌ನಲ್ಲಿ ಎಷ್ಟು ಪಾರ್ಕ್‌ಗಳು ಇವೆಯೋ ಅದಕ್ಕಿಂತ 5 ಪಟ್ಟು ಹೆಚ್ಚು ಪಾರ್ಕ್‌ಗಳು 30, 31, 32, 34ನೇ ವಾರ್ಡ್‌ಗಳಲ್ಲಿ ಇವೆ. ಈ ವಾರ್ಡ್‌ಗಳಲ್ಲಿ ಸುಮಾರು 400 ರಿಂದ 500 ಪಾರ್ಕ್‌ಗಳಿದ್ದು, ಇದರಲ್ಲಿ ಬಹುತೇಕ ಪಾರ್ಕ್‌ಗಳನ್ನು ಭೂಗಳ್ಳರು ಒತ್ತುವರಿ ಮಾಡಿರುವುದರಿಂದ ಅವುಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕಿದೆ. ಉದ್ಯಾನಗಳು ಉಳಿಯಬೇಕಾದರೆ ನಾಗರಿಕ ಸಮಿತಿಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾಗರಿಕರು ಕಾರ್ಯೋನ್ಮುಖರಾಗಬೇಕು ಎಂದು ಜ್ಯೋತಿಗಣೇಶ್ ಮನವಿ ಮಾಡಿದರು.

ದಿಶಾ ಸಮಿತಿ ಸಭೆಯಲ್ಲಿ ಜಿಲ್ಲೆಗೆ ಸಂಬಂಧಿಸಿದ ಸಾರ್ವಜನಿಕ ಸ್ವತ್ತುಗಳು ಹಾಗೂ ಎಲ್ಲ ಯೋಜನೆಗಳನ್ನು ವೆಬ್ ಪೋರ್ಟಲ್‌ನಲ್ಲಿ ಅಳವಡಿಸಿ ಅಗತ್ಯ ಮಾಹಿತಿಗಳು ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಈ ಎಲ್ಲ ಕಾರ್ಯಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಸ್ವಲ್ಪ ಹಣದ ಕೊರತೆ ಇದ್ದು ಎಲ್ಲವನ್ನು ಸರಿದೂಗಿಸುತ್ತೇವೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಉಪಮೇಯರ್ ನಾಜಿಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್, ಧರಣೇಂದ್ರಕುಮಾರ್, ದಿಶಾ ಸಮಿತಿ ರಾಜ್ಯ ಸದಸ್ಯ ಕುಂದರನಹಳ್ಳಿ ರಮೇಶ್, ಕಾರ್ಪೋರೇಟರ್‌ಗಳಾದ ಸಿ.ಎನ್.ರಮೇಶ್, ನರಸಿಂಹಮೂರ್ತಿ, ವಿ.ಎಸ್.ಗಿರಿಜಾ, ಕೆ.ಎಸ್.ಮಂಜುಳಾ, ನವೀನಾ, ದೀಪಶ್ರೀ, ಮುಜಿದಾ ಖಾನಂ, ಮೋಹನ್, ತ್ಯಾಗರಾಜ ಸ್ವಾಮಿ, ಟೂಡಾ ಆಯುಕ್ತ ಯೋಗಾನಂದಕುಮಾರ್ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಗೆ 9 ಲಕ್ಷ ರೂ.: ಈ ಮೊದಲು ಪಾರ್ಕ್‌ಗಳಲ್ಲಿ ಅಲಂಕಾರಿಕ ಗಿಡಗಳನ್ನು ಹಾಕುತ್ತಿದ್ದೆವು. ಈಗ ಆಯುರ್ವೇದ ಔಷಧ ಗಿಡಗಳನ್ನು ನೆಡುತ್ತಿದ್ದೇವೆ. ಪಾರ್ಕ್‌ಗಳಲ್ಲಿ ಗಿಡ ನೆಡುವ ಕಾರ್ಯಕ್ಕೆ ಸಾಮಾಜಿಕ ಅರಣ್ಯ ಇಲಾಖೆಗೆ 9 ಲಕ್ಷ ರೂಪಾಯಿ ನೀಡಲಾಗಿದೆ. ನಗರ ಸುಂದರವಾಗಿ ಕಾಣಲು ಉದ್ಯಾನವನ, ರಸ್ತೆ, ಚರಂಡಿಗಳು ಅಭಿವೃದ್ಧಿಯಾಗಬೇಕು ಎಂದು ಮೇಯರ್ ಬಿ.ಜಿ.ಕೃಷ್ಣಪ್ಪ ತಿಳಿಸಿದರು. ನಗರದ 35 ವಾರ್ಡ್‌ಗಳಲ್ಲೂ ಸರ್ವೇ ಮಾಡಲಾಗಿದ್ದು, 361 ಪಾರ್ಕ್‌ಗಳು ಪತ್ತೆಯಾಗಿವೆ. ಜಿಇಎಸ್ ಲೇಯರ್‌ನಲ್ಲಿ ಪಾರ್ಕ್‌ಗಳ ಮಾಹಿತಿ ಅಳವಡಿಸಲಾಗುತ್ತಿದೆ. ಪಾರ್ಕ್‌ಗಳ ಸಂರಕ್ಷಣೆಗೆ ಪಾಲಿಕೆ ಸದಸ್ಯರು, ಸಂಘ-ಸಂಸ್ಥೆಗಳು, ಎನ್‌ಜಿಒಗಳು ಸಹಕಾರ ನೀಡಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net