ದಕ್ಷಿಣ ಕನ್ನಡ : ವಿಧಾನ ಪರಿಷತ್ ಉಪ ಚುನಾವಣೆಗೆ ಸಿದ್ಧತೆ ಪೂರ್ಣ

council
Published on





ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಅ.21ರಂದು ಉಪ ಚುನಾವಣೆ ನಡೆಯಲಿದ್ದು ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು 6,032 ಮತದಾರರಿದ್ದಾರೆ.
ದ.ಕ.ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರ ಸಭೆಗಳಲ್ಲಿ 64, ಮೂರು ಪುರಸಭೆಗಳಲ್ಲಿ 74 , ಐದು ನಗರ ಪಂಚಾಯಿತಿಯಲ್ಲಿ 86 ಮಂದಿ ಹಾಗೂ ಉಡುಪಿ ಜಿಲ್ಲೆಯ 153 ಗ್ರಾಮ
ಪಂಚಾಯಿತಿಯಲ್ಲಿ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, ಮೂರು ಪುರಸಭೆಯಲ್ಲಿ 72 , ಒಂದು ನಗರ ಪಂಚಾಯಿತಿಯಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ದ.ಕ. ಜಿಲ್ಲೆಯ 234 ಮತಗಟ್ಟೆಯಲ್ಲಿ 3,552( ಪುರುಷರು- 1,710 ಮಹಿಳೆಯರು - 1,842 )ಮತದಾರರು ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಯಲ್ಲಿ 2,480 ( ಪುರುಷರು - 1,195 , ಮಹಿಳೆಯರು - 1,285 ) ಮತದಾರರಾಗಿದ್ದಾರೆ.
*ಮನಪಾ ಅತ್ಯಧಿಕ ಮತದಾರರು
ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ 49 ಮತಗಟ್ಟೆಗಳಿವೆ. ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ 793 ಮತದಾರರಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಅತಿ ಕಡಿಮೆ 9 ಮತಗಟ್ಟೆಗಳು ಹಾಗೂ 122 ಮತದಾರರಿದ್ದಾರೆ. ದ.ಕ. ಜಿಲ್ಲೆಯ ಮಡಪ್ಪಾಡಿ ಗ್ರಾಪಂ ಹಾಗೂ ಕೊಣಾಜೆ ಗ್ರಾಪಂ ಮತಗಟ್ಟೆಗಳಲ್ಲಿ ತಲಾ 5 ಮತದಾರರುಹಾಗೂ ಉಡುಪಿ ಜಿಲ್ಲೆಯ ಹಳ್ಳಿಹೊಳೆ ಮತ್ತು ಎಡಮೊಗೆ ಗ್ರಾಪಂ ಮತಗಟ್ಟೆಗಳಲ್ಲಿ ತಲಾ 6 ಮತದಾರರು ಇದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ 65 ಹಾಗೂ ಉಡುಪಿ ಜಿಲ್ಲೆಯ ಶಿರೂರು ಗ್ರಾಮ ಪಂಚಾಯಿತಿಯಲ್ಲಿ 44 ಮಂದಿ ಮತ ಚಲಾಯಿಸಲಿದ್ದಾರೆ.
ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ ತಲಾ 470 ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೋ ಆಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಮಂಗಳೂರು ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅ.24ರಂದು ನಡೆಯಲಿದೆ.
ಚುನಾವಣಾ ಕಣದಲ್ಲಿ ಕಿಶೋರ್ ಬಿ.ಆರ್ (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದತ್.ಎಸ್ (ಎಸ್‌ಡಿಪಿಐ) ಮತ್ತು ದಿನಕರ ಉಳ್ಳಾಲ (ಪಕ್ಷೇತರ) ಸ್ಪರ್ಧಿಸುತ್ತಿದ್ದಾರೆ.
...............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net