ಲಕ್ಷ ದಾಟದ ಮತದಾರರ ಸಂಖ್ಯೆ : ಪದವೀಧರ ಕ್ಷೇತ್ರದ ಮತದಾರರಾಗಲು ನಿರುತ್ಸಾಹ

mng-21may-vote
Published on


*ಪಿ.ಬಿ.ಹರೀಶ್ ರೈ

ಮಂಗಳೂರು : ಮತದಾನ ಮಾಡಲು ಅರ್ಹತೆ ಹೊಂದಿರುವವರು ಅಂದಾಜು 15 ಲಕ್ಷ ಮಂದಿ . ಆದರೆ ಮತದಾನ ಮಾಡಲು ಬಯಸಿದವರು ಕೇವಲ 85 ಸಾವಿರ..ಇದು ನೈಋತ್ಯ ಪದವೀಧರ ಕ್ಷೇತ್ರದ ಸ್ಥಿತಿ. ನೈಋತ್ಯ ಮಾತ್ರವಲ್ಲ ರಾಜ್ಯದ ಇತರ ಪದವೀಧರ ಕ್ಷೇತ್ರಗಳಲ್ಲೂ ಹೆಚ್ಚಿನ ವಿದ್ಯಾವಂತರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಆಸಕ್ತಿ ವಹಿಸಿಲ್ಲ.
ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಮಾಡಲು 18 ವರ್ಷ ಮೀರಿದವರು ಅರ್ಹರು. ಅದೇ ರೀತಿ ಪದವಿ ಶಿಕ್ಷಣ ಪೂರೈಸಿದವರು ಮೂರು ವರ್ಷಗಳ ಬಳಿಕ ಪದವೀಧರ ಕ್ಷೇತ್ರದಲ್ಲಿ ಮತ ಚಲಾಯಿಸಲು ಅರ್ಹರು. ಆದರೆ ಮಹಾ ಚುನಾವಣೆಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಇರುವ ಉತ್ಸಾಹ ವಿಧಾನ ಪರಿಷತ್‌ನ ಈ ಚುನಾವಣೆಗಳಲ್ಲಿ ಕಂಡು ಬರುತ್ತಿಲ್ಲ.
*ನೋಂದಣಿ ಕಿರಿಕಿರಿ :
ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಕ್ರಮಬದ್ಧವಾದ ನೋಂದಣಿ ಅವಶ್ಯ. ತಾಲೂಕು ಕಚೇರಿಗಳಿಗೆ ತೆರಳಿ ನಿಗದಿತ ಅರ್ಜಿ ಭರ್ತಿ ಮಾಡಿ, ಪದವಿ ಪ್ರಮಾಣಪತ್ರ ಸಹಿತ ಸಲ್ಲಿಸಬೇಕು. ಪದವಿ ಪಡೆದು ಮೂರು ವರ್ಷವಾಗಿರುವುದು ಕಡ್ಡಾಯ. ಒಮ್ಮೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದರೂ, ಆರು ವರ್ಷಗಳ ಬಳಿಕ ಮತ್ತೆ ನೋಂದಣಿ ಮಾಡಿದರೆ ಮಾತ್ರ ಮತದಾನದ ಹಕ್ಕು.
ಪದವಿ ಪಡೆದು ಉದ್ಯೋಗ ಅರಸುತ್ತಿರುವವರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಗೋಜಿಗೆ ಹೋಗುವುದಿಲ್ಲ. ಇನ್ನು ಉದ್ಯೋಗ ಪಡೆದವರಿಗೆ ನಮಗ್ಯಾಕೆ ಬೇಕು ಮತದಾನ ಎಂಬ ನಿರ್ಲಕ್ಷೃ . ಒಟ್ಟಿನಲ್ಲಿ ನೋಂದಣಿ ಮಾಡಿಸಿಕೊಳ್ಳುವುದೇ ಪದವೀಧರರಿಗೆ ಕಿರಿಕಿರಿ. ರಾಜಕೀಯ ಪಕ್ಷಗಳು ತಮಗೆ ಖಚಿತವಾಗಿ ಮತ ನೀಡುವವರನ್ನು ಮಾತ್ರ ಸೇರ್ಪಡೆ ಮಾಡುತ್ತಾರೆ. ಪರಿಣಾಮ ನೈಋತ್ಯ ಪದವೀಧರ ಕ್ಷೇತ್ರದ ಮತದಾರರ ಸಂಖ್ಯೆ ಲಕ್ಷ ದಾಟುತ್ತಿಲ್ಲ.
*30 ವಿಧಾನಸಭೆ ಕ್ಷೇತ್ರ ವ್ಯಾಪ್ತಿ :
ನೈಋತ್ಯ ಪದವೀಧರ ಕ್ಷೇತ್ರ ದ.ಕ., ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳ ವ್ಯಾಪ್ತಿಯಲ್ಲಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 30 ವಿಧಾನಸಭಾ ಕ್ಷೇತ್ರಗಳಿದ್ದು 60 ಲಕ್ಷಕ್ಕೂ ಮಿಕ್ಕಿ ಮತದಾರರಿದ್ದಾರೆ. ಈ ಪೈಕಿ 15 ಲಕ್ಷ ಮಂದಿ ಪದವೀಧರರು ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ನೋಂದಣಿಯಾದ ಪದವೀಧರ ಮತದಾರರ ಸಂಖ್ಯೆ 85, 090 ಮಾತ್ರ.


* ಮತದಾರರ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ಅಗತ್ಯವಿದೆ. ಪ್ರತಿ ಬಾರಿ ಅರ್ಜಿ ಭರ್ತಿ ಮಾಡಿ, ಪದವಿ ಪ್ರಮಾಣಪತ್ರ ,
ಆಧಾರ್ ಕಾರ್ಡ್ ಯಥಾಪ್ರತಿ ಸಲ್ಲಿಸುವ ವ್ಯವಸ್ಥೆ ಈಗಲೂ ಜಾರಿಯಲ್ಲಿದೆ. ಇದರಿಂದ ಹೆಚ್ಚಿನ ಪದವೀಧರರು ನೋಂದಣಿಗೆ ಆಸಕ್ತಿ ವಹಿಸುತ್ತಿಲ್ಲ. ಈಗ ಪದವಿ ಪ್ರಮಾಣಪತ್ರ ದೃಢೀಕರಣಕ್ಕೆ ಡಿಜಿ ಲಾಕರ್‌ನಂತಹ ಸೌಲಭ್ಯ ಇರುವಾಗ ಅನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಸಬಹುದು.
-ವಿಕಾಸ್ ಪುತ್ತೂರು, ಬಿಜೆಪಿ ವಕ್ತಾರ
* ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ಪ್ರತಿ ಬಾರಿ ದಾಖಲೆ ಒದಗಿಸುವ ಅವಶ್ಯಕತೆ ಇರುವ ಕಾರಣ ಹೆಚ್ಚಿನವರು ಆಸಕ್ತಿ ವಹಿಸುತ್ತಿಲ್ಲ. ನೋಂದಣಿ ಪ್ರಕ್ರಿಯೆಗೆ ರಾಜಕೀಯ ಪಕ್ಷಗಳು ಕೂಡಾ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ಪರಿಷತ್ ಚುನಾವಣೆ
ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಆಸಕ್ತಿ ವಹಿಸಿ ನೋಂದಣಿ ಮಾಡಿಸುತ್ತಿದ್ದಾರೆ.
-ಎಸ್.ಪಿ.ದಿನೇಶ್, ಪಕ್ಷೇತರ ಅಭ್ಯರ್ಥಿ, ನೈಋತ್ಯ ಪದವೀಧರ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net