

ಪಿ.ಬಿ.ಹರೀಶ್ ರೈ, ಮಂಗಳೂರು
ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾಯಿತರಾದ ಸದಸ್ಯರ ಅವಧಿ 2022ರ ಜ.5ಕ್ಕೆ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸದಸ್ಯ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ತೆ ಅಭ್ಯರ್ಥಿಯಾಗುವುದು ಖಚಿತ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, 11 ಮಂದಿ ತಲಾ 1 ಲಕ್ಷ ರೂ. ಶುಲ್ಕ ಸಹಿತ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ದ್ವಿ ಸದಸ್ಯ ಕ್ಷೇತ್ರವಾಗಿರುವ ದ.ಕ.(ಉಡುಪಿ ಜಿಲ್ಲೆ ಸಹಿತ)ದಲ್ಲಿ 6500ಕ್ಕೂ ಅಧಿಕ ಮತದಾರರಿದ್ದು, ಪ್ರಥಮ ಪ್ರಾಶಸ್ತ್ಯದ ಗೆಲುವಿಗೆ 2200 ಮತ ಪಡೆಯಬೇಕು. ಆದರೆ ಈ ಬಾರಿ ಜಿಪಂ ಮತ್ತು ತಾಪಂ ಚುನಾವಣೆ ನಡೆಯದ ಕಾರಣ ಸುಮಾರು 200 ಮತ ಕಡಿಮೆ ಆಗಲಿದೆ. ಗ್ರಾಪಂ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಈಗಿನ ಬಲಾಬಲ ಪರಿಗಣಿಸಿದರೆ ಉಭಯ ಪಕ್ಷಗಳು ತಲಾ ಒಂದು ಸ್ಥಾನ ಗೆಲ್ಲಬಹುದು.
ಬಿಜೆಪಿಯಿಂದ 2 ಅಭ್ಯರ್ಥಿ?: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸುಮಾರು 3,600 ಹಾಗೂ ಕಾಂಗ್ರೆಸ್ ಸುಮಾರು 2,100 ಮತದಾರರನ್ನು ಹೊಂದಿದೆ. ಎಸ್‌ಡಿಪಿಐ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಸುಮಾರು 400 ಮಂದಿ ಇದ್ದಾರೆ. ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಓರ್ವ ಅಭ್ಯರ್ಥಿ ಆಯ್ಕೆಯಾಗಿ ಹೆಚ್ಚುವರಿ ಮತ ಉಳಿಯಲಿದೆ. ಹಾಗಾಗಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ಕಾಂಗ್ರೆಸ್‌ಗೆ ಆಯ್ಕೆ ಕಗ್ಗಂಟು: ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ.ಮೋಹನ್, ಐವನ್ ಡಿಸೋಜ, ಕುಂದಾಪುರದ ಶ್ಯಾಮಲಾ ಭಂಡಾರಿ, ಪುತ್ತೂರಿನ ಕಾವು ಹೇಮನಾಥ ಶೆಟ್ಟಿ ಸಹಿತ ಒಟ್ಟು 11 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕೆಲವರು ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವುದರಿಂದ ಆಯ್ಕೆ ಕಗ್ಗಂಟಾಗಲಿದೆ. ಕಾಂಗ್ರೆಸ್‌ನಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯದಿದ್ದರೆ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.
ಮೂರನೇ ಬಾರಿಗೆ ಆಯ್ಕೆ : ವಿಧಾನ ಪರಿಷತ್‌ಗೆ 2003ರ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿತ್ತು. ಮಾಜಿ ಶಾಸಕರಾಗಿದ್ದ ಪ್ರತಾಪಚಂದ್ರ ಶೆಟ್ಟಿ ಮತ್ತು ಬ್ಲೇಸಿಯಸ್ ಡಿಸೋಜ ಚುನಾಯಿತರಾಗಿದ್ದರು. ಬ್ಲೇಸಿಯಸ್ ಅವಧಿ ಪೂರ್ಣವಾಗುವ ಮೊದಲು ನಿಧನರಾಗಿ, 2008ರ ಉಪ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸುವ ಮೂಲಕ ಕೈ ವಶದಲ್ಲಿದ್ದ ಸ್ಥಾನ ಬಿಜೆಪಿ ಪಾಲಾಯಿತು. 2010ರಲ್ಲಿ ಕೋಟ ಮತ್ತು ಪ್ರತಾಪಚಂದ್ರ ಶೆಟ್ಟಿ ಅವಿರೋಧ ಆಯ್ಕೆಯಾದರೆ, 2015ರಲ್ಲಿ ಇಬ್ಬರೂ ಚುನಾಯಿತರಾಗಿ ಮೂರನೇ ಬಾರಿಗೆ ಆಯ್ಕೆಯಾದರು.
ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಕಾರ್ಯ ನಿರಂತರ ನಡೆಯುತ್ತಿರುವ ಕಾರಣ ಬಿಜೆಪಿ ಚುನಾವಣೆಗೆ ಸದಾ ಸಿದ್ಧವಾಗಿದೆ. ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಚುನಾಯಿತ ಸದಸ್ಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ, ಸಂಖ್ಯೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ.
ಸುದರ್ಶನ ಮೂಡುಬಿದಿರೆ
ಅಧ್ಯಕ್ಷರು, ದ.ಕ.ಜಿಲ್ಲಾ ಬಿಜೆಪಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಸಲೀಸಾಗಿ ಗೆಲ್ಲಲಿದೆ. ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದಲ್ಲಿ ಆಕಾಂಕ್ಷಿಗಳು ಸಹಜ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಯ್ನನು ಆಯ್ಕೆ ಮಾಡುತ್ತದೆ. ಬಳಿಕ ಎಲ್ಲರೂ ಆ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ.
-ಪಿ.ವಿ.ಮೋಹನ್
ಕಾರ್ಯದರ್ಶಿ, ಎಐಸಿಸಿ