

ಶಿವಮೊಗ್ಗ: ಈ ಬಾರಿ ಹೋರಾಟ ಮತ್ತು ಹಣದ ನಡುವೆ ಚುನಾವಣೆ ನಡೆಯಿತು. ಎರಡೂ ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ನೀಡಿದ್ದರು. ನನಗೆ ಬಿಜೆಪಿ ಅಭ್ಯರ್ಥಿಗಿಂತ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರೇ ಪೈಪೋಟಿ ನೀಡಿದ್ದಾರೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ಲೇಷಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಲಿತಾಂಶ ಪ್ರಕಟವಾಗುವ ಸಮಯ ಸನ್ನಿಹಿತವಾಗಿದೆ. ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಪದವೀಧರ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಮತದಾರರ ಸಂಖ್ಯೆಯೂ ಹೆಚ್ಚಿತ್ತು. 20 ಸಾವಿರ ಹೆಚ್ಚು ಮತದಾನವಾಗಿದೆ. ಎಲ್ಲೆಡೆ ಒಳ್ಳೆಯ ವಾತಾವರಣ ಕಂಡುಬಂದಿತ್ತು. ಹೀಗಾಗಿ ಗೆಲುವಿನ ವಿಶ್ವಾಸ ಹೆಚ್ಚಿದೆ ಎಂದರು.
ಜನರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಅನ್ನು ಪುರಸ್ಕರಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಉತ್ತಮವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಲೋಕಸಭೆ ಚುನಾವಣೆ ಫಲಿತಾಂಶವನ್ನು ವಿಶ್ಲೇಷಿಸಿದರು.
ಶಿವಮೊಗ್ಗದಲ್ಲಿ ನರೇಂದ್ರ ಮೋದಿ ಗೆದ್ದರೂ ದೇಶದಲ್ಲಿ ಗೆಲ್ಲಲಿಲ್ಲ. 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತೇವೆ ಎಂದಿದ್ದರು. ಆದರೆ ಸರಳ ಬಹುಮತ ಬರಲಿಲ್ಲ. ಶ್ರೀರಾಮನನ್ನು ಪ್ರಚಾರ ಕಣಕ್ಕೆ ಎಳೆದುತಂದರೂ ಆಗಲಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ 35 ಸ್ಥಾನ ಕಳೆದುಕೊಂಡಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಜನರ ತೀರ್ಮಾನಕ್ಕೆ ನಾವು ತಲೆಬಾಗುತ್ತೇವೆ. ಈ ಚುನಾವಣೆ ಮೋದಿ ಮತ್ತು ಗೀತಾ ನಡುವೆ ನಡೆದಂತೆ ಕಾಣುತ್ತಿತ್ತು. ಬಿಜೆಪಿ ಅಭ್ಯರ್ಥಿ ಎಲ್ಲಿಯೂ ನನಗೆ ಮತ ನೀಡಿ ಎಂದು ಕೇಳಲಿಲ್ಲ. ಕಣದಲ್ಲಿ ಸ್ವಜನ ಪಕ್ಷಪಾತ, ಹಣ ಗೆದ್ದಿದೆ ಎಂದು ತಿಳಿಸಿದರು.