ಮೇಲುಕೋಟೆ ವನ್ಯಜೀವಿಧಾಮ ಸಂರಕ್ಷಣೆಗೆ ಆದ್ಯತೆ: ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಮಾಹಿತಿ

8mlk4
Published on

ಮಂಡ್ಯ: ಮೇಲುಕೋಟೆ ವನ್ಯಜೀವಿಧಾಮದಲ್ಲಿರುವ ಕೃಷ್ಣಮೃಗ, ಚಿರತೆ, ಹೆಬ್ಬಾವು, ಕರಡಿ, ಚಿಪ್ಪುಹಂದಿ, ಕಾಡುಹಂದಿ, ಉರಗಗಳು ಹಾಗೂ ನವಿಲು, ಗಿಳಿ, ಗೊರವಂಕ, ಪಾರಿವಾಳ, ಮರಕುಟಿಗ ಸೇರಿದಂತೆ 400ಕ್ಕೂ ಹೆಚ್ಚು ವಿಧದ ಪಕ್ಷಿಗಳು ಸುರಕ್ಷಿತವಾಗಿವೆ ಎಂದು ಮೇಲುಕೋಟೆ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ತಿಳಿಸಿದರು.

ಮೇಲುಕೋಟೆಯಲ್ಲಿ ಅರಣ್ಯ ಇಲಾಖೆಯ 68ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಎಸ್.ಇ.ಟಿ. ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮೇಲುಕೋಟೆ ದೇವಾಲಯಕ್ಕೆ ಎಷ್ಟು ಮಹತ್ವ ನೀಡಲಾಗಿದೆಯೋ ಅಷ್ಟೇ ಮಹತ್ವವನ್ನು 16 ಎಕರೆ ವಿಸ್ತೀರ್ಣದಲ್ಲಿರುವ ವನ್ಯಜೀವಿಧಾಮ ಹಾಗೂ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ. ಅತ್ಯಂತ ವಿಶೇಷವಾದ ಸಸ್ಯ ಪ್ರಭೇದಗಳು, ವೃಕ್ಷಗಳು, ಗಿಡಮೂಲಿಕೆಗಳು ಮೇಲುಕೋಟೆ ಕಾಡಿನಲ್ಲಿವೆ. ಮೇಲುಕೋಟೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ವನ್ಯಜೀವಿ ಸಂರಕ್ಷಿಸಲು ಇಲಾಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಕದಲಗೆರೆಯ ಜಾನಪದ ಕಲಾವಿದ ನರಸಿಂಹರಾಜು ತಂಡದ ಡೊಳ್ಳುಕುಣಿತ ಜಾಥಾಕ್ಕೆ ಮೆರುಗು ನೀಡಿತು. ವನ್ಯಜೀವಿ ಸಪ್ತಾಹದ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಬಹುಮಾನ ವಿತರಿಸಲಾಯಿತು.

ಉಪವಲಯ ಅರಣ್ಯಾಧಿಕಾರಿ ಸುರೇಶ್, ಮುರಳಿ, ನಂಜುಂಡಸ್ವಾಮಿ, ಅಯ್ಯಪ್ಪ, ಯೋಗೇಶ್, ಗ್ರಾಪಂ ಉಪಾಧ್ಯಕ್ಷ ತಿರುಮಲೈ, ಸದಸ್ಯ ಜಿ.ಕೆ.ಕುಮಾರ್, ಎಸ್.ಇ.ಟಿ ಪಾಲಿಟೆಕ್ನಿಕ್ ರಿಜಿಸ್ಟಾರ್ ನಿಂಗೇಗೌಡ, ಪಿಡಿಒ ರಾಜೇಶ್ವರ್, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net