

ಮಂಡ್ಯ: ಸಾಮಾನ್ಯವಾಗಿ ಪ್ರತಿದಿನ ಊಟ, ಆಟ ಹೀಗೆ ಹಲವು ರೀತಿಯ ಚಾಲೆಂಜ್‌ಗಳನ್ನು ನೋಡಿದ್ದೇವೆ. ಆದರೆ ಪರಿಸರ ಸಂರಕ್ಷಣೆಗಾಗಿ ಮಂಡ್ಯದ ಯುವಕರ ತಂಡ ಐದು ವರ್ಷದ ಹಿಂದೆ ಪ್ರಾರಂಭಿಸಿದ ಸವಾಲು ಭಾರತ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಸೈ ಎನ್ನಿಸಿಕೊಂಡಿದೆ.
ಕಂಡಕಂಡಲ್ಲಿ ಮರ ಗಿಡಗಳನ್ನು ಕಟಾವು ಮಾಡುತ್ತಿರುವುದರ ನಡುವೆ ಪರಿಸರದ ಉಳಿವಿಗಾಗಿ ಮಳವಳ್ಳಿ ತಾಲೂಕು ಬೆಳಕವಾಡಿ ಗ್ರಾಮದ ಯುವಕರು 2018ರಲ್ಲಿ ‘ಗಿಡ ನೆಡು ಮರ ಮಾಡಿ’ ಎನ್ನುವ ವಿಭಿನ್ನ ಸವಾಲನ್ನು ಜನರ ಮುಂದಿಟ್ಟರು. ಪ್ರಾರಂಭದಲ್ಲಿ ಸ್ಪಂದನೆ ಸಿಗದಿದ್ದರೂ ದಿನ ಕಳೆದಂತೆ ಯುವಕರ ಪರಿಸರ ಕಾಳಜಿಗೆ ಬೆಂಬಲ ಸಿಗಲಾರಂಭಿಸಿತು. ಮಾತ್ರವಲ್ಲದೆ ಈ ಸವಾಲು ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿಸಿತು.
1 ಲಕ್ಷ ಗಿಡ ನೆಟ್ಟಿದ ಜನರು: ಪ್ರಾರಂಭದಲ್ಲಿ ಆರು ಯುವಕರ ತಂಡ ಸಾಮಾಜಿಕ ಜಾಲತಾಣದಲ್ಲಿ ಹಲವು ಚಾಲೆಂಜ್ ನೀಡುವ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಅದರಂತೆ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ತಾವು ಏನಾದರೂ ಸವಾಲು ಹಾಕಬೇಕೆಂದು ತೀರ್ಮಾನಿಸಿದರು. ಅದರಂತೆ ‘ಗಿಡ ನೆಡು ಮರ ಮಾಡು’ ಎಂಬ ಶೀರ್ಷಿಕೆಯಿಟ್ಟು 2018 ಆ.15ರಂದು ಬೆಳಕವಾಡಿಯಲ್ಲಿ ಚಾಲನೆಯನ್ನು ನೀಡುವ ಮೂಲಕ ಸ್ವಾತಂತ್ರೋತ್ಸವವನ್ನು ವಿಭಿನ್ನವಾಗಿ ಆಚರಿಸಿದ್ದರು. ಅಂದು ಕೊಳ್ಳೆಗಾಲದ ಸಿಪಿಐ ಆಗಿದ್ದ ಶ್ರೀಕಾಂತ್ ಅಭಿಯಾನಕ್ಕೆ ಚಾಲನೆ ನೀಡಿ ಯುವಕರಿಗೆ ಸಾಥ್ ನೀಡಿದ್ದರು.
ಬಳಿಕ ಫೇಸ್ಬುಕ್‌ನಲ್ಲಿ ಶೀರ್ಷಿಕೆ ಹೆಸರಿನಲ್ಲಿ ಖಾತೆ ತೆರೆದು ಸವಾಲು ನೀಡಲಾಯಿತು. ಹೆಸರೇ ವಿಭಿನ್ನವಾಗಿದ್ದರಿಂದ ಜನರನ್ನು ಸೆಳೆಯಲಾರಂಭಿಸಿತು. ಮಕ್ಕಳು, ದೊಡ್ಡವರೆನ್ನದೇ ಎಲ್ಲ ವಯೋಮಾನದವರೂ ಸವಾಲು ಸ್ವೀಕರಿಸುತ್ತಾ ಹೋದರು. ಗಿಡ ನೆಟ್ಟು ನಾನು ಸವಾಲು ಸ್ವೀಕರಿಸಿದ್ದೇನೆಂದು ವಿಡಿಯೋ ಮಾಡಿ ಅದನ್ನು ಖಾತೆಗೆ ಅಪ್‌ಲೋಡ್ ಮಾಡಲಾರಂಭಿಸಿದರು. ಇದೇ ರೀತಿ ಮುಂದುವರೆದು ಇಂದು ಸಾಕಷ್ಟು ಜನರನ್ನು ತಲುಪಿದೆ. ಇನ್ನು ಯುವಕರ ತಂಡದ ಸಾರ್ಥಕ ಕೆಲಸಕ್ಕೆ ಹಲವು ಗಣ್ಯರು ಬೆನ್ನು ತಟ್ಟಿದ್ದರು. ಅವರು ಕೂಡ ಗಿಡ ನೆಟ್ಟು ಬೇರೆಯವರು ಸವಾಲು ಸ್ವೀಕರಿಸುವಂತೆ ಮನವಿ ಮಾಡಿದ್ದರು. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಚಿತ್ರನಟರಾದ ಉಪೇಂದ್ರ, ನೀನಾಸಂ ಸತೀಶ್, ಥ್ರಿಲ್ಲರ್ ಮಂಜು, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಎಸ್.ನಾರಾಯಣ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಪೊಲೀಸರು, ಪತ್ರಕರ್ತರು, ಸೈನಿಕರು ಕೂಡ ವಿಡಿಯೋ ಮೂಲಕ ಯುವಕರ ಕಾಳಜಿಗೆ ಬೆಂಬಲವಾಗಿ ನಿಂತರು.
ಇನ್ನು ಸವಾಲು ವೈರಲ್ ಆಗುತ್ತಿದ್ದಂತೆ ಜಿಲ್ಲೆಯ ಗಡಿ ದಾಟಿ ಬೇರೆ ಜಿಲ್ಲೆ, ತಮಿಳುನಾಡು ತಲುಪಿತು. ಬಳಿಕ ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ನೈಜರಿಯಾ, ಇಂಗ್ಲೆಂಡ್, ಜರ್ಮನಿಯಲ್ಲಿರುವ ಕನ್ನಡಿಗರು ಕೂಡ ಸವಾಲು ಸ್ವೀಕರಿಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದರು. ಯುವಕರ ತಂಡದ ಸದಸ್ಯರ ಅಂದಾಜು ಮಾಹಿತಿ ಪ್ರಕಾರ ಐದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಗಿಡಗಳನ್ನು ನೆಡಲಾಗಿದೆ. ಈ ಪೈಕಿ ಬಹುತೇಕರು ೆಷಣೆ ಮಾಡುತ್ತಾ ಮರವನ್ನಾಗಿಸಿದ್ದಾರೆ.
ವಿಶೇಷವೆಂದರೆ ಯುವಕರ ತಂಡದಲ್ಲಿ ಪೊಲೀಸ್, ಬ್ಯಾಂಕ್ ಅಧಿಕಾರಿಗಳಿದ್ದಾರೆ. ಆದ್ದರಿಂದ ತಮ್ಮ ಹಿರಿಯ ಅಧಿಕಾರಿಗಳು, ಸಹದ್ಯೋಗಿಗಳು, ಸ್ನೇಹಿತರು, ಸಂಬಂಧಿಕರಿಂದ ಗಿಡ ನೆಡಿಸಿ ಸವಾಲು ಸ್ವೀಕರಿಸಿ ವಿಡಿಯೋ ಮಾಡಿದರು. ಅದೇ ರೀತಿ ಒಬ್ಬರಿಂದ ಒಬ್ಬರಿಗೆ ತಿಳಿದು ಹೆಚ್ಚಿನ ಸದ್ದು ಮಾಡಿತು. ಪ್ರಾರಂಭದ ದಿನಗಳಲ್ಲಿ ಮದುವೆ, ತಿಥಿ, ರಕ್ತದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಸವಾಲು ಸ್ವೀಕರಿಸಲಾಗಿತ್ತು. ವಿದ್ಯಾಸಂಸ್ಥೆ, ಸಂಘ ಸಂಸ್ಥೆ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದವರು ಸಸಿ ಖರೀದಿಸಿ ಜನರಿಗೆ ವಿತರಿಸುವ ಕೆಲಸ ಮಾಡಿದ್ದರು.
ಕಡಿಮೆಯಾಗಿಲ್ಲ ಕಾಳಜಿ: ಐದು ವರ್ಷವಾದರೂ ಯುವಕರ ಕಾಳಜಿ ಕಡಿಮೆಯಾಗಿಲ್ಲ. ಇಂದಿಗೂ ಅವಕಾಶ ಸಿಕ್ಕಾಗಲೆಲ್ಲ ಗಿಡ ನೆಡುವ ಕೆಲಸ ಮಾಡುತ್ತಿರುತ್ತಾರೆ. ಅವರು ಮಾಡುವ ಮನವಿ ಎಂದರೆ, ಸವಾಲು ಸ್ವೀಕರಿಸಿ ಗಿಡ ನೆಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಉತ್ತಮ ಕೆಲಸ. ಇದರಿಂದ ಮತ್ತೊಬ್ಬರು ಪ್ರೇರಣೆಗೊಂಡರೆ ಸಾರ್ಥಕ. ಆದರೆ, ನೆಟ್ಟಿರುವ ಗಿಡವನ್ನು ಮರವನ್ನಾಗಿ ಮಾಡಲು ಆಸಕ್ತಿ ತೋರಬೇಕಿದೆ. ಇಲ್ಲದಿದ್ದರೆ ಕೇವಲ ಪ್ರಚಾರಕ್ಕಾಗಿ ಮಾಡಿದಂತಾಗುತ್ತದೆ. ಆದ್ದರಿಂದ, ಗಿಡ ನೆಟ್ಟವರು ಕನಿಷ್ಟ ಆರೇಳು ವರ್ಷ ಅದನ್ನು ಸಂರಕ್ಷಿಸಿ ಸಾರ್ಥಕತೆ ಸಿಗುತ್ತದೆ. ಜತೆಗೆ ಉತ್ತಮ ಪರಿಸರ ನಿರ್ಮಿಸುವಲ್ಲಿ ನಿಮ್ಮದು ಕೊಡುಗೆ ನೀಡಿದಂತಾಗುತ್ತದೆ ಎಂದು ಮನವಿ ಮಾಡುತ್ತಾರೆ.
ಯುವಕರ ಪ್ರಯತ್ನವನ್ನು ನೋಡಿದವರಿಗೆ ಸಣ್ಣದು ಎನ್ನಿಸಿದರೂ ಅದರಿಂದಾಗುತ್ತಿರುವ ಪರಿಣಾಮ ಕಡಿಮೆ ಏನಿಲ್ಲ. ಆದ್ದರಿಂದ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಸವಾಲು ಇನ್ನಷ್ಟು ಪರಿಣಾಮಕಾರಿಯಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಸಹಕಾರವೂ ಅತ್ಯಗತ್ಯವಾಗಿದೆ.