ಜವಾಬ್ದಾರಿ ನಿರ್ವಹಿಸದಿದ್ದರೆ ಅನಾಹುತ: ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ

1 (9)
Published on

ಮಂಡ್ಯ: ಭೂಮಿಯ ಮೇಲಿನ ಪ್ರತಿಯೊಬ್ಬರೂ ಪರಿಸರ ಉಳಿಸುವ ನಿಟ್ಟಿನಲ್ಲಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸದಿದ್ದರೆ ಅನಾಹುತ ಎದುರಾಗುವುದರ ಜತೆಗೆ ಮುಂದಿನ ಪೀಳಿಗೆ ಬದುಕು ಉಳಿಯಲು ಸಾಧ್ಯವಿಲ್ಲ ಎಂದು ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.

ನಗರದ ಕಾವೇರಿ ಉದ್ಯಾನದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಕೃಷಿಕ ಲಯನ್ಸ್ ಸಂಸ್ಥೆ , ಕಲಾತಪಸ್ವಿ ಟ್ರಸ್ಟ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಪರಿಸರ ಕುರಿತು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಸ್ಯ ಮತ್ತು ಪ್ರಕೃತಿ ಸಂಪತ್ತು ಸಮತೋಲನದಿಂದ ಇದ್ದರಷ್ಟೇ ಜೀವಸಂಪತ್ತು ಉಳಿದುಕೊಳ್ಳುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳದಿಂದ ಅಂತರ್ಜಲ ಮತ್ತು ಜಲಾಶಯ ಸಂಪತ್ತೆಲ್ಲ ಶೀಘ್ರ ಆವಿಯಾಗುತ್ತಿದೆ ಎಂದರು.

ಅತಿವೃಷ್ಟಿಯ ನಂತರವೂ ಜಲಕ್ಷಮ ಭಾದಿಸುವಂತಾಗಿದೆ. ಅರಣ್ಯ ಹಾಗೂ ಜೀವ ವೈವಿಧ್ಯದ ನಿರಂತರ ವಿನಾಶದಿಂದಾಗಿ ಇಡೀ ಜಗತ್ತೇ ದೊಡ್ಡ ಸಂಕಷ್ಟದತ್ತ ಹೊರಳುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಸಮಗ್ರ ಪರಿಸರದಿಂದ ಮಾತ್ರ ಮಾನವ ಸಂಪತ್ತು ಸಮೃದ್ಧಿಯಾಗಿರಲು ಸಾಧ್ಯ. ಪ್ರಕೃತಿಗೆ ಮನುಷ್ಯನ ಅವಶ್ಯಕತೆ ಇಲ್ಲ. ಮನುಷ್ಯನಿಗೆ ಪ್ರಕೃತಿಯೇ ಅವಶ್ಯಕತೆ ಎಂಬುದನ್ನು ಅರಿಯಬೇಕಿದೆ. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಪ್ರಜ್ಞೆ ಮತ್ತು ಸೃಜನಾತ್ಮಕ ಭಾವನೆಗಳನ್ನು ಅರಳಿಸಿದರೆ ಉತ್ತಮ ಪರಿಸರ ಸ್ನೇಹಿ ಪ್ರಜೆಗಳಾಗುತ್ತಾರೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಪ್ರಾಣಿ ಪಕ್ಷಿ ಹಾಗೂ ಜೀವ ಸಂಪತ್ತುಗಳೊಂದಿಗೆ ಮನುಷ್ಯ ಬದುಕು ಬೇಕೇ ಹೊರತು ನಾಶ ಮಾಡುತ್ತಾ ಬದುಕಿದರೆ ಮನುಕುಲವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಸಂಪತ್ತನ್ನು ನಾಶ ಮಾಡಿದರೆ ಮಾನವ ಸಂಪತ್ತು ವಿನಾಶದಂತಿಗೆ ಸಾಗುತ್ತದೆ. ಮಾತ್ರವಲ್ಲದೆ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮುಂದಿನ ಪೀಳಿಗೆಗೆ ಅನಾರೋಗ್ಯಕರ ವಾತಾವರಣ ನಿರ್ಮಿಸುವುದು ಬೇಡ. ಮಕ್ಕಳ ಜನ್ಮದಿನವನ್ನು ಒಂದೊಂದು ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಣೆ ಮಾಡಬೇಕು. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಸಿಗಳು ಮರವಾಗಿ ಪರಿಸರಕ್ಕೆ ಪೂರಕವಾಗಿರುತ್ತವೆ ಎಂದು ಕಿವಿಮಾತು ಹೇಳಿದರು.

ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್‌ಕುಮಾರ್, ಸಕ್ಕರೆನಾಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಶಶಿಧರ ಈಚೆಗೆರೆ, ಸಾಹಿತಿ ವೀರಪ್ಪ ಕೀಲಾರ, ಕಲಾತಪಸ್ವಿ ಟ್ರಸ್ಟ್ ಕಾರ್ಯದರ್ಶಿ ಅನಿಲ್ ಕುಮಾರ್, ಸಂಚಾಲಕ ಶಿವಪ್ರಸಾದ್, ಲೋಹಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net