ಪ್ರೇಕ್ಷಕರ ಮನಸೂರೆಗೊಂಡ ಪರಿಣಯ ಪ್ರಸಂಗ ನಾಟಕ

IMG-20240102-WA0180
ಶ್ರೀರಂಗಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಒಳಾಂಗಣದ ರಂಗವೇದಿಕೆಯಲ್ಲಿ ಪರಿಣಯ ಪ್ರಸಂಗ ನಾಟಕವನ್ನು ಗಮ್ಯ ತಂಡದ ಕಲಾವಿದರು ಪ್ರದರ್ಶಿಸಿದರು.
Published on

ಶ್ರೀರಂಗಪಟ್ಟಣ: ಪಟ್ಟಣದ ಗಮ್ಯ ಕಲಾ ತಂಡದ ವತಿಯಿಂದ ಇತ್ತೀಚೆಗೆ ಪ್ರದರ್ಶನ ನೀಡಿದ ಪರಿಣಯ ಪ್ರಸಂಗ ನಾಟಕ ತಾಲೂಕಿನ ಕಲಾರಸಿಕರು ಹಾಗೂ ಪುರಜನರ ಮನಸೂರೆಗೊಂಡಿತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಂಗ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗಮ್ಯ ತಂಡದ ಸ್ಥಳೀಯ ಕಲಾವಿದರು ಮುರಳಿ ಶೃಂಗೇರಿ ರಚನೆಯ, ರಮೇಶ್ ಬೆಣಕಲ್ ನಿರ್ದೇಶನದ ಪರಿಣಯ ಪ್ರಸಂಗ ನಾಟಕವನ್ನು ನೈಜತೆಯಿಂದ ಪಾತ್ರಗಳಲ್ಲಿ ಪರಕಾಯ ಪ್ರವೇಶಿಸಿ ಜನರ ಮನಸ್ಸಿಗೆ ಹತ್ತಿರವಾಗುವಂತೆ ನಟಿಸಿ ರಂಜಿಸುವಲ್ಲಿ ಯಶಸ್ವಿಯಾದರು.

ಪ್ರಸ್ತುತ ಸಮಾಜದಲ್ಲಿ ರಾಜಕೀಯ ವಿಡಂಬನೆ, ಭ್ರಷ್ಟಾಚಾರ, ತೆರಿಗೆ ಕಳ್ಳತನವನ್ನು ಬಿಂಬಿಸುವ ಗಂಭೀರ ಮತ್ತು ಹಾಸ್ಯ ಸನ್ನಿವೇಶಗಳು ಪ್ರಸ್ತುತ ರಾಜಕಾರಣಕ್ಕೆ ಹೋಲಿಕೆ ಆಗುವಂತೆ ಹಾಗೂ ಆತ್ಮೀಯ ಗೆಳೆಯರು ತಮ್ಮ ಸದುದ್ದೇಶಗಳನ್ನು ಈಡೇರಿಸಿಕೊಳ್ಳಲು ಮಾಡುವ ಪ್ರಯತ್ನಗಳ ಕುರಿತು ನುರಿತ ಕಲಾವಿದರನ್ನು ನಾಚಿಸುವಂತಹ ಸ್ಥಳೀಯ ಕಲಾವಿದರ ಅಭಿನಯ ನೆರೆದಿದ್ದ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿ ಪ್ರಶಂಸೆಗೆ ಪಾತ್ರವಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೊಡ್ಡಪಾಳ್ಯ ಲೋಕೇಶ್, ಪ್ರೊ.ಶಿವಣ್ಣ, ಜಯರಾಮು, ಗಮ್ಯ ತಂಡದ ನಿರ್ದೇಶಕ ಚ. ನಾರಾಯಣಸ್ವಾಮಿ, ಲೇಖಕ ಹಾಗೂ ನಿರ್ದೇಶಕ ರಾಜಶೇಖರ್, ಕಲಾವಿದ ಹಾಗೂ ನಿರ್ದೇಶಕ ಆದಿತ್ಯ ಚಿಂಟು ಸೇರಿದಂತೆ ಇತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net