

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಾ.4 ರಿಂದ 23 ರವರೆಗೆ ನಡೆಯಲಿರುವ ದ್ವಿತೀಯ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆಸಲು ಸಹಕರಿಸುವಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರಿಗೆ ಇಲಾಖೆ ಕೆಲವೊಂದು ಸೂಚನೆ ಪಾಲಿಸುವಂತೆ ಸೂಚಿಸಿದೆ.
ಮುಖ್ಯವಾಗಿ ಪರೀಕ್ಷಾ ಕಾರ್ಯಗಳಿಗೆ ಅಡ್ಡಿಯುಂಟು ಮಾಡುವ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಇಂಥ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ರವಾನಿಸಿದೆ.
ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಇಲಾಖೆಯ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಲೇಬೇಕು, ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಿತ ಪ್ರದೇಶವಾಗಿರುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಾರ್ಹ ಅಪರಾಧ: ಎಲೆಕ್ಟ್ರಾನಿಕ್ ಉಪಕರಣಗಳಾದ ಇ-ಕ್ಯಾಮರಾ, ಲ್ಯಾಪ್‌ಟಾಪ್ ಮತ್ತಿತರ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಯಾವುದೇ ವಿದ್ಯುನ್ಮಾನ ಉಪಕರಣ ಹೊಂದಿರುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದು. ಪರೀಕ್ಷಾ ಅಕ್ರಮ ತಡೆಗೆ ರಾಜ್ಯ ಶಿಕ್ಷಣ ಕಾಯ್ದೆ 1983 ತಿದ್ದುಪಡಿ ಕಾಯ್ದೆ 2017 ಜಾರಿಗೆ ತರಲಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದರೆ 5 ವರ್ಷ ಸೆರೆ ಅಥವಾ ರೂ.5 ಲಕ್ಷ ರೂ.ದಂಡ ಅಥವಾ ಎರಡನ್ನೂ ವಿಧಿಸಬಹುದು.
ಪರೀಕ್ಷಾರ್ಥಿಗಳು ನಕಲು ಮಾಡುವುದು, ನಕಲು ಮಾಡಲು ಸಹಾಯ ಮಾಡುವುದು, ಬದಲಿ ವ್ಯಕ್ತಿಯಾಗಿ ಪರೀಕ್ಷೆ ಬರೆಯುವುದು, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ಮೊಬೈಲ್ ಉಪಯೋಗಿಸುವುದು ಪರೀಕ್ಷಾ ಅಕ್ರಮಗಳಾಗಿದ್ದು, ಇಂತಹ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕ್ರಮ ವಹಿಸಲಾಗುವುದು. ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಅಕ್ರಮ ಎಸಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಮುಳ್ಳು ಹೊಂದಿರುವ ಸಾಮಾನ್ಯ ಕೈಗಡಿಯಾರವನ್ನು ಧರಿಸಲು ಅನುಮತಿ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಆತಂಕವಿಲ್ಲದೆ ನಿರ್ಭೀತಿಯಿಂದ ಪರೀಕ್ಷೆ ಎದುರಿಸುವಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಪೂರ್ವ ಸಿದ್ಧತೆ ಕೈಗೊಂಡಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲಿವೆ. ಎನ್.ಎಂ.ನಾಗರಾಜ್ ಜಿಪಂ ಸಿಒಒ ಪಿಯು ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಿಯುಸಿ ಪರೀಕ್ಷೆ ಹಿನ್ನಲೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ. ಜಗದೀಶ್ ಕೆ.ನಾಯಕ್ ಅಪರ ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ
13 ಕೇಂದ್ರಗಳಲ್ಲಿ ಪರೀಕ್ಷೆ: ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ 4, ಹೊಸಕೋಟೆ 3, ದೊಡ್ಡಬಳ್ಳಾಪುರ 3, ವಿಜಯಪುರ 2 ಹಾಗೂ ದೇವನಹಳ್ಳಿ ಸೇರಿ ಒಟ್ಟು 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 9442 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.