

ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಅನುಷಾ ಓದುತ್ತಿರುವ ಉಡುಪಿ ಜಿಲ್ಲೆಯ ಅಲ್ಬಾಡಿ-ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಕೇಂದ್ರ ಶಿಕ್ಷಣ ಸಚಿವಾಲಯ ನಿಯೋಜಿಸಿರುವ ವಿಭೋರ್ ವಿಡಿಯೋ ವಿಷನ್ ಸಂಸ್ಥೆಯ ನಿರ್ದೇಶಕ ಜಯರಾಜೇಂದ್ರ ಚೋಳನ್ ಭೇಟಿ ನೀಡಿದರು.
ವಿದ್ಯಾರ್ಥಿನಿ ಅನುಷಾಳ ಸಂದರ್ಶನ ನಡೆಸಿ, ಶಾಲೆಯ ಕಿರುಚಿತ್ರ ತಯಾರಿಗೆ ಬೇಕಾದ ವಿಡಿಯೋಗಳನ್ನು ಚಿತ್ರೀಕರಿಸಿದರು. ಚಾರ್ಮಕ್ಕಿ ನಾರಾಯಣ ಶೆಟ್ಟಿ ಕುಟುಂಬದ ಜಯಕರ ಶೆಟ್ಟಿ ಚಾರ್ಮಕ್ಕಿ, ಉದ್ಯಮಿ ಪ್ರಶಾಂತ ಶೆಟ್ಟಿ ಆರ್ಡಿ, ಬೆಳ್ವೆ ಗ್ರಾಪಂ ಅಧ್ಯಕ್ಷ ಎಸ್.ಚಂದ್ರಶೇಖರ ಶೆಟ್ಟಿ ಸೂರ‌್ಗೋಳಿ, ಸದಸ್ಯ ರೋಹಿತ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಜಯದೇವ ಹೆಗ್ಡೆ ನೂಜಟ್ಟು, ಆದರ್ಶ ಶೆಟ್ಟಿ, ಬಾಲಕೃಷ್ಣ ಶೆಣೈ ಆರ್ಡಿ, ಪ್ರಕಾಶ ಶೆಣೈ ಆರ್ಡಿ, ಅರುಣ ಶೆಟ್ಟಿ, ಪ್ರಹ್ಲಾದ್ ಶೆಟ್ಟಿ, ವಿನಯ ಶೆಟ್ಟಿ, ಮುಖ್ಯಶಿಕ್ಷಕ ಶೇಖರ ಶೆಟ್ಟಿಗಾರ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕರ ತಂಡ, ಶಿಕ್ಷಕ ಸುರೇಶ್ ಮರಕಾಲ ಸಾಬ್ರಕಟ್ಟೆ ಹಾಗೂ ಸಹ ಶಿಕ್ಷಕ ವೃಂದವರು, ಸ್ಥಳೀಯರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಶೇಖರ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಸಾಬ್ರಕಟ್ಟೆ ನಿರ್ದೇಶನದಲ್ಲಿ ಶಿಕ್ಷಕರ ಸಹಯೋಗದೊಂದಿಗೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಕೆಲವು ದಿನಗಳ ಪ್ರೊಮೋಶನಲ್ ವೀಡಿಯೋ ಚಿತ್ರೀಕರಣ ನಡೆದಿತ್ತು. ಅತ್ಯಂತ ಗ್ರಾಮೀಣ ಪ್ರದೇಶ, ಪಶ್ಚಿಮ ಘಟ್ಟಗಳ ತಪ್ಪಲಿನ ದಟ್ಟ ಕಾಡಿನಿಂದಾವೃತ ಪ್ರದೇಶದಿಂದ ಬರುವ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಂವಾದಕ್ಕೆ ಆಯ್ಕೆಯಾಗಿದ್ದು, ಈಕೆ ಗುಡ್ಡೆಯಂಗಡಿ ಕೆಸ್ಕರ್‌ಜೆಡ್ಡು ಕೃಷ್ಣ ಕುಲಾಲ - ಜಯಲಕ್ಷ್ಮೀ ದಂಪತಿಯ ಪುತ್ರಿ.
ಸಚಿವ ಸುರೇಶ್ ಕುಮಾರ್ ಅಭಿನಂದನೆ
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಅನುಷಾಳಿಗೆ ಶಿಕ್ಷಣ ಸಚಿವ ಸುರೇಶ ಕುಮಾರ್ ಹಾಗೂ ಅವರ ಪತ್ನಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅವರೊಂದಿಗೆ ಅನುಷಾ ಸಂತಸ ಹಂಚಿಕೊಂಡು ಧನ್ಯವಾದ ಸಲ್ಲಿಸಿದ್ದಾಳೆ. ಶಾಲೆಯ ಶಿಕ್ಷಕರನ್ನೂ ಸಚಿವರು ಅಭಿನಂದಿಸಿದ್ದಾರೆ.