ದೇವಸ್ಥಾನ ಸಾಮರಸ್ಯದ ಕೇಂದ್ರ: ಎಡನೀರು ಶ್ರೀ

udp-6-parika 1
Published on

ಉಡುಪಿ: ದೇವಸ್ಥಾನಗಳು ಸಾಮಾಜಿಕ ಸಾಮರಸ್ಯ ಕಾಪಾಡುವ ಕೇಂದ್ರಗಳಾಗಬೇಕು. ಬ್ರಹ್ಮಕಲಶೋತ್ಸವದಲ್ಲಿ ಎಲ್ಲಾ ವರ್ಗದ ಜನರು ನಿಸ್ವಾರ್ಥ ಭಾವದಿಂದ ಸ್ಪಂದಿಸಿರುವುದು ಶ್ಲಾನೀಯ. ಭಕ್ತರು ದೇವಸ್ಥಾನದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಹೇಳಿದರು.

ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೊಳಪಟ್ಟ ಪರೀಕ ಸೌಖ್ಯವನ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕೆಲವು ಸಮಾಜ ವಿದ್ರೋಹಿ ಶಕ್ತಿಗಳು ಧಾರ್ಮಿಕ ಒಡಕಿಗೆ ಕಾರ್ಯತಂತ್ರ ರೂಪಿಸುತ್ತಿವೆ. ವೈಮನಸ್ಯಗಳಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು. ಸಮಾಜಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಹಬಾಳ್ವೆ ನಡೆಸಬೇಕು ಎಂದರು.  ಭೌತಿಕ ಮತ್ತು ಪಾರಮಾರ್ಥಿಕ ಸೌಖ್ಯ ಕೇಂದ್ರ ದೇವಸ್ಥಾನ. ದೇವರ ಆರಾಧನೆಯಲ್ಲಿ ಪರಸ್ಪರ ಭಿನ್ನಮತ ಮತ್ತು ವಿರೋಧಾಭಾಸಗಳಿದ್ದಾಗ ಶಂಕರಾಚಾರ್ಯರು ಪಂಚಾಯತನ ಪೂಜಾ ಪದ್ಧತಿ ಪ್ರಾರಂಭಿಸಿ ದೇವರ ಹೆಸರಿನಲ್ಲಿ ಕಾದಾಡಬಾರದು ಎಂಬ ಸಂದೇಶ ನೀಡಿದ್ದಾರೆ. ಪರೀಕದಲ್ಲಿ ಶ್ರೀನಿವಾಸ, ಸೋಮೇಶ್ವರ, ಮಹಾಗಣಪತಿ ದೇವರು ಜೊತೆಯಾಗಿ ಅನುಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ಭಾವೀ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಮಾತನಾಡಿ, ಬ್ರಹ್ಮಕಲಶೋತ್ಸವ, ಅರ್ಚಕತಪಸ್ಸು, ಪಾರಾಯಣಗಳು, ಭಜನೆಗಳಿಂದ ದೇವಸ್ಥಾನದ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಇದರಿಂದ ಭಕ್ತರಿಗೂ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಗವಂತನ ಸಣ್ಣ ಸಣ್ಣ ಸೇವೆಗಳಲ್ಲಿ ಕೈಜೋಡಿಸುವುದರಿಂದಲೂ ಪುಣ್ಯ ಪ್ರಾಪ್ತಿಯಾಗುತ್ತದೆ. ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ ಎಂದು ಹೇಳಿದರು.

ಧರ್ಮಸ್ಥಳ ಧಮಾರ್ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ವೇದಮೂರ್ತಿ ಹೆರ್ಗ ಜಯರಾಮ ತಂತ್ರಿ, ಆತ್ರಾಡಿ ಗ್ರಾಪಂ ಅಧ್ಯಕ್ಷ ಹರೀಶ್​ ಶೆಟ್ಟಿ ಉಪಸ್ಥಿತರಿದ್ದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್​ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರಸಾದ್​ ಧರ್ಮಸ್ಥಳ ಹಾಗೂ ಸೌಖ್ಯವನ ವ್ಯವಸ್ಥಾಪಕ ಪ್ರವಿಣ್​ ಕುಮಾರ್​ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳಕ್ಕೆ ದಾನ ರೂಪದಲ್ಲಿ ದೊರೆತ ಜಾಗದಲ್ಲಿ ಆರೋಗ್ಯ ವರ್ಧಕ ಕೇಂದ್ರ ಸ್ಥಾಪನೆ ಮಾಡಿದ್ದೇವೆ. ಪ್ರಸ್ತುತ ವಿಷ್ಣು, ಶಿವ, ಗಣಪತಿ ಸಾನಿಧ್ಯವಿರುವ ದೇವಸ್ಥಾನ ಜೀಣೋರ್ದ್ಧಾರಗೊಳಿಸಲಾಗಿದೆ. ಜೀವನದಲ್ಲಿ ಪ್ರತಿಯೊಬ್ಬರ ಅಪೇೆ ಉತ್ತಮ ಆರೋಗ್ಯ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಠವಾಗಿದ್ದರೆ ಮಾತ್ರ ಸತ್ಕರ್ಮ ಮಾಡಲು ಸಾಧ್ಯ. ಪುಣ್ಯಪುರುಷರನ್ನು ಜನರು ಸದಾ ಜ್ಞಾಪಿಸಿಕೊಳ್ಳುತ್ತಾರೆ. ಡಾ.ಡಿ. ವೀರೇಂದ್ರ ಹೆಗ್ಗಡೆ , ಧರ್ಮಸ್ಥಳ ಧಮಾರ್ಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net