

ತುಮಕೂರು : ವಿಧಾನ ಪರಿಷತ್ ಚುನಾವಣೆ ಮತದಾನದ ನಂತರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಪೆಟ್ಟಿಗೆಗಳು ಭದ್ರವಾಗಿವೆ. ಆದರೆ, ಜನರ ಕೂತೂಹಲ ತಣಿದಿಲ್ಲ. ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲುವ ಉತ್ಸಾಹದಲ್ಲಿದ್ದು ಬೆಟ್ಟಿಂಗ್‌ಗೂ ಸಿದ್ಧರಾಗಿದ್ದಾರೆ.
ಕಣದಲ್ಲಿದ್ದವರ ಪೈಕಿ ಪ್ರಮುಖ ಮೂರು ಪಕ್ಷದ ಕಾರ್ಯಕರ್ತರು ಗೆಲುವು ಶತಃಸಿದ್ಧ ಎಂದೇ ಎಣಿಸಿದ್ದಾರೆ. ಕೂಡಿ, ಕಳೆದು, ಗುಣಿಸಿ, ಭಾಗಿಸುವ ಲೆಕ್ಕಾಚಾರದಲ್ಲಿ ಪಕ್ಷದ ಅಭ್ಯರ್ಥಿಗೇ ಗೆಲುವು ಎಂದು ವಾದಕ್ಕಿಳಿಯುತ್ತಿದ್ದಾರೆ. ಎಲ್ಲದಕ್ಕೂ ಕಾರಣನಾಗಿರುವ ಮತದಾರ ಮಾತ್ರ ಮೌನವಾಗಿದ್ದಾನೆ.
ಯಾವ ತಾಲೂಕಿನಲ್ಲಿ ಯಾರಿಗೆ ಲೀಡ್, ಯಾವ ಮುಖಂಡ ಯಾರ ಪರವಾಗಿದ್ದ, ಯಾರು ಯಾರಿಗೆ ವಿರೋಧ ಮಾಡಿದರು, ಜಾತಿ, ಸಂಘ, ಸಂಸ್ಥೆ, ಸಹಕಾರ, ಅಸಹಕಾರ ಹೀಗೆ.. ತರಹೇವಾರಿ ವಿಷಯಗಳನ್ನಿಟ್ಟುಕೊಂಡು ವಿವಿಧ ಆಯಾಮಗಳಲ್ಲಿ ಸೋಲು ಹಾಗೂ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಚುನಾವಣೆ ಆರಂಭದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ಫೈಟ್ ಎಂದು ಅಂದಾಜಿಸಿದ್ದ ರಾಜಕೀಯ ಪಂಡಿತರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಮತದಾನದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಿಜೆಪಿಯೂ ಬಿರುಸಿನಿಂದಲೇ ಚುನಾವಣೆ ನಡೆಸಿದ್ದು, ಕುಂಚಿಟಿಗ ಸಮುದಾಯದ ಅನಿರೀಕ್ಷಿತ ಬೆಂಬಲ ಬಿಜೆಪಿ ಉತ್ಸಾಹವನ್ನು ಹೆಚ್ಚಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡ ಜಿಲ್ಲೆಯಲ್ಲಿ ಪ್ರಬಲವಾಗಿದ್ದು ಗೆಲುವಿನ ವಿಶ್ವಾಸದಲ್ಲಿವೆ.
ಮೂರು ಪಕ್ಷಗಳು ತಮ್ಮೆಲ್ಲ್ಲ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡಿವೆ. ಪರಸ್ಪರ ‘ಸಹಕಾರ ತತ್ವ’ ಕೈ ಹಿಡಿಯಲಿದೆ ಎಂಬ ನಂಬಿಕೆ ಕಾಂಗ್ರೆಸ್ ವಲಯದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೆಚ್ಚು ಸದಸ್ಯರನ್ನು ಹೊಂದಿರುವ ಜೆಡಿಎಸ್ ಅಭ್ಯರ್ಥಿ ಜಿಲ್ಲೆಯಲ್ಲಿ ಸುಲಭವಾಗಿ ಗೆಲ್ಲಬಹುದು. ಆದರೆ, ಅಲ್ಲೂ ಭಯದ ವಾತಾವರಣವಿದ್ದರೂ ದೇವೇಗೌಡರ ಶಕ್ತಿಯ ಮೇಲೆ ನಂಬಿಕೆ ಉಳಿಸಿಕೊಂಡಿದೆ.
ಮಂಗಳವಾರ ಬೆಳಗ್ಗೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು ಸಂಜೆ ವೇಳೆಗೆ ಫಲಿತಾಂಶ ಹೊರಬಿದ್ದು, ಸಾರ್ವಜನಿಕರ ಕೂತೂಹಲಕ್ಕೆ ತೆರೆ ಬೀಳಲಿದೆ.
ಬೆಟ್ಟಿಂಗ್ ಭರಾಟೆ ; ಗೆಲುವಿನ ವಿಶ್ವಾಸದಲ್ಲಿರುವ ಪ್ರಮುಖ ಮೂರು ಪಕ್ಷಗಳಲ್ಲಿ ಬೆಟ್ಟಿಂಗ್ ಜೋರಾಗಿದೆ, ಪಕ್ಷ ಹಾಗೂ ಅಭ್ಯರ್ಥಿ ಮೇಲಿನ ಅಭಿಮಾನ ಹಳ್ಳಿಗಳಲ್ಲಿ ಕಾರ್ಯಕರ್ತರಲ್ಲಿ ಬೆಟ್ಟಿಂಗ್‌ಗೆ ಪ್ರೇರೇಪಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದ್ದರೂ, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳೂ ಬಿಜೆಪಿ ಪರವಾಗಿ ಬಾಜಿಕಟ್ಟಲು ತುದಿಗಾಲಲ್ಲಿ ನಿಂತಿದ್ದಾರೆ. ಮತದಾನದ ನಂತರ ಜೆಡಿಎಸ್‌ನಲ್ಲಿ ಕೊಂಚ ನಿರುತ್ಸಾಹ ಕಾಣಿಸಲಾರಂಭಿಸಿದ್ದು ಕದನ ಕುತೂಹಲ ದುಪ್ಪಟ್ಟಾಗಿದೆ.