

ಶಿವಮೊಗ್ಗ: ಹೊನ್ನಾವರದ ಯುವಕ ಪರೇಶ್ ಮೇಸ್ತ ಸಾವಿನ ಪ್ರಕರಣ ಮರು ತನಿಖೆ ಆಗಬೇಕು. ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ನಾನೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಪರೇಶ್ ಮೇಸ್ತನದ್ದು ಕೊಲೆಯಲ್ಲ, ಸಹಜ ಸಾವೆಂದು ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ ಬೆನ್ನಲ್ಲೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಅಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿಲ್ಲ ಎನ್ನುವುದು ಕುಟುಂಬಸ್ಥರು ಮತ್ತು ಹಿಂದೂಗಳ ಆಗ್ರಹವಾಗಿದೆ. ಹಾಗಾಗಿ ಮರು ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಮರು ತನಿಖೆ ಬಳಿಕ ಯಾವುದೇ ವರದಿ ಬಂದರೂ ನಾವೂ ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಹೊನ್ನಾವರ ನ್ಯಾಯಾಲಯಕ್ಕೆ ಅಧಿಕಾರಿಗಳು ಪ್ರಸ್ತುತ ಸಲ್ಲಿಸಿರುವ ವರದಿ ಸಮಾಧಾನ ತಂದಿಲ್ಲ. ಈ ಬಗ್ಗೆ ಸರ್ಕಾರ ಕೂಲಂಕಶವಾಗಿ ಚರ್ಚಿಸಿ ಮತ್ತೊಮ್ಮೆ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.