ಪಾಲಕರು ಮಕ್ಕಳಿಗೆ ಸನಾತನ ಧರ್ಮದ ಮೌಲ್ಯ ತಿಳಿಸಿ

25skpp1 krishna radha
Published on

ಸಕಲೇಶಪುರ : ಪಾಲಕರು ಮಕ್ಕಳಿಗೆ ಸನಾತನ ಧರ್ಮದ ಮೌಲ್ಯಗಳನ್ನು ಜಾಗೃತಿಗೊಳಿಸಬೇಕಾದ ಅವಶ್ಯಕತೆ ಹೆಚ್ಚಿದೆ ಎಂದು ಸಂಕ್ಲಾಪುರ ಮಠದ ಸಾಧ್ವಿ ಉಜ್ವಲಾನಂದ ಸರಸ್ವತಿ ಹೇಳಿದರು.


ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ವಿಶ್ವಹಿಂದೂ ಪರಿಷತ್ ಸ್ಥಾಪನ ದಿವಸದ ಅಂಗವಾಗಿ ಪಟ್ಟಣದ ಪುರಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೃಷ್ಣ ಮತ್ತು ರಾಧಾವೇಷಧಾರಿಗಳ ಸ್ಪರ್ಧೆೆ ಉದ್ದೇಶಿಸಿ ಮಾತನಾಡಿದರು.


ಕೃಷ್ಣನಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಇದೆ. ಕೃಷ್ಣನಿಗೆ ನಮ್ಮ ಸಂಸ್ಕೃತಿಯಲ್ಲಿ ಉನ್ನತ ಸ್ಥಾನವಿದ್ದು, ಪ್ರತಿಯೊಂದು ಮಕ್ಕಳಲ್ಲೂ ನಾವು ಕೃಷ್ಣನನ್ನು ಕಾಣುತ್ತೇವೆ. ಮಕ್ಕಳಿಗೆ ಪಾಲಕರು ಇಷ್ಟು ಕಷ್ಟಪಟ್ಟು ಕೃಷ್ಣ ರಾಧೆಯ ವೇಷವನ್ನು ಹಾಕಿ ಕರೆದುಕೊಂಡು ಬಂದಿರುವುದು ಸಾಕಾಗುವುದಿಲ್ಲ. ಮಕ್ಕಳ ಮನಸಲ್ಲಿ ಸನಾತನ ಧರ್ಮ ಸಂಸ್ಕೃತಿಯ ಬಗ್ಗೆ ಕಾಳಜಿ ಬೆಳೆಸಲು ಮುಂದಾಗಬೇಕು. ಇದರಿಂದ ಪ್ರತಿಯೋರ್ವ ಮಕ್ಕಳು ಧರ್ಮದ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.


ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷರಾದ ಕಲಾವತಿ ಮಧುಸೂಧನ್ ಮಾತನಾಡಿದರು. ಸುಮಾರು 400ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಮತ್ತು ರಾಧಾ ವೇಷದಾರಿಗಳಾಗಿ ಭಾಗವಹಿಸಿದ್ದರು. ಹಲವು ಮುಸ್ಲಿಂ ಮಹಿಳೆಯರು ತಮ್ಮ ಮಕ್ಕಳಿಗೆ ಕೃಷ್ಣ ಮತ್ತು ರಾಧಾವೇಷವನ್ನು ಹಾಕಿದ್ದು ಕೋಮು ಸೌರ್ಹಾದತೆಗೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ವಿತರಣೆ ಮಾಡಲಾಯಿತು. ನಂತರ ಮಕ್ಕಳಿಗಾಗಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಸಹ ನಡೆಸಲಾಯಿತು,.


ಮುಖ್ಯ ಅತಿಥಿಗಳಾಗಿ ಶೀಲಾ ಸುಧಾಕರ್, ಮೀನಾಕ್ಷಿ ಖಾದರ್, ಪ್ರತಿಮಾ ಸಂತೋಷ್, ವಸಂತ ಮಲ್ಲೇಶ್, ವಿಎಚ್‌ಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ, ವಿಎಚ್‌ಪಿ ತಾಲೂಕು ಕಾರ್ಯದರ್ಶಿ ಮಂಜು ಕಬ್ಬಿನಗದ್ದೆ, ವಿಎಚ್‌ಪಿ ನಗರ ಅಧ್ಯಕ್ಷ ಆಟೋ ಲೋಕೇಶ್, ಬಜರಂಗದಳ ಮುಖಂಡರುಗಳಾದ ಕೌಶಿಕ್, ಶಿವು ಜಿಪ್ಪಿ, ದುಷ್ಯಂತ್ ಗೌಡ, ಧರ್ಮೇಶ್, ಸುಭಾಷ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net