ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಲಿ

ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಲಿ
Published on

ಗುಂಡ್ಲುಪೇಟೆ: ವಿದ್ಯಾರ್ಥಿಗಳಿಗೆ ಪಾಲಕರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವಂತೆ ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ಶಿಕ್ಷಣ ಸಂಯೋಜಕಿ ಮಂಗಳಾ ಮುದ್ದು ಮಾದಪ್ಪ ಕಿವಿಮಾತು ಹೇಳಿದರು.

ಶನಿವಾರ ಪಟ್ಟಣದ ಶ್ರೀ ವಿನಾಯಕ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಶಿಸ್ತಿನ ಕೊರತೆ ಹೆಚ್ಚಾಗುತ್ತಿದೆ ಇದರಿಂದ ಪಾಲಕರು ಅವರಿಗೆ ಶಿಕ್ಷಣ ಕೊಡಿಸುವುದರೊಂದಿಗೆ ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಜಾಗರೂಕರಾಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣದೊಂದಿಗೆ ಮಕ್ಕಳು ನಮ್ಮ ಆಚಾರ, ವಿಚಾರ ಸಂಸ್ಕಾರವನ್ನು ತಿಳಿದುಕೊಂಡಾಗ ಮಾತ್ರ ಸಮಾಜಕ್ಕೆ ಉತ್ತಮ ಪ್ರಜೆಯಾಗಲಿದ್ದಾರೆ ಎಂದರು.

ಮೈಸೂರಿನ ಮಹಾರಾಣಿ ಕಾಲೇಜಿನ ಪ್ರೊಫೆಸರ್ ಡಾ.ಹೇಮಚಂದ್ರ ಮಾತನಾಡಿ, ಮಕ್ಕಳಲ್ಲಿ ಇತ್ತೀಚೆಗೆ ಮೊಬೈಲ್ ಹಾವಳಿ ಹೆಚ್ಚಾಗುತ್ತಿದ್ದು ಬಿಡುವಿನ ಸಮಯವನ್ನು ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡದೆ ಮೊಬೈಲ್‌ನಲ್ಲಿ ಮನರಂಜನೆಯನ್ನು ಪಡೆಯಲು ಕಾಲಹರಣ ಮಾಡುತ್ತಿದ್ದಾರೆ. ಇದನ್ನು ಪಾಲಕರು ಗಮನಿಸಿ ಅವರು ಹೆಚ್ಚು ಮೊಬೈಲ್ ಬಳಸದಂತೆ ನಿಗಾ ವಹಿಸಬೇಕು ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಹೆಚ್ಚು ಒತ್ತನ್ನು ನೀಡಬೇಕೆಂದರು.

ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಚ್.ನಂಜಪ್ಪ, ಚಾಮರಾಜನಗರ ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಉಮೇಶ್, ವಿನಾಯಕ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪವಿತ್ರಾ, ಸಂಸ್ಥೆಯ ಮುಖ್ಯಸ್ಥರಾದ ಕೆ.ಎನ್. ಚಂದ್ರಶೇಖರ್, ಲಕ್ಷ್ಮೀ ಚಂದ್ರಶೇಖರ್ ಇತರರು ಇದ್ದರು. ಶಾಲಾ ವಾರ್ಷಿಕೋತ್ಸವ ಹಿನ್ನೆಲೆ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net