

ನಾಪೋಕ್ಲು: ಪಾಲಕರು ತಮ್ಮ ಮಕ್ಕಳಿಗೆ ಅರೆಭಾಷೆಯನ್ನು ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡುವಂತಾಗಬೇಕು ಎಂದು ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಯ್ಯಂಡಾಣೆ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಹಯೋಗದಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅರೆಭಾಷೆ ಗಡಿನಾಡ ಉತ್ಸವದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಭಾಷೆ ಬೆಳವಣಿಗೆಗೆ ಪೂರಕವಾಗುವ ಈ ರೀತಿಯ ಕಾರ್ಯಕ್ರಮಗಳನ್ನು ಇನ್ನಷ್ಟು ಆಯೋಜಿಸಿ ಅರೆಭಾಷೆ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದರು.
ನಿವೃತ್ತ ಶಿಕ್ಷಕಿ ಮಂಞಂಡ್ರ ರೇಖಾ ಉಲ್ಲಾಸ್ ಮಾತನಾಡಿ, ಆಟದಲ್ಲಿ ಸಕಾರಾತ್ಮಕ ಭಾವನೆ ಇರಬೇಕು. ಕ್ರೀಡೆಗೆ ಸಂಬಂಧಿಸಿದಂತೆ ಸೋಲನ್ನು ಯಶಸ್ಸಿನ ಮೆಟ್ಟಿಲು ಎಂದು ಪರಿಗಣಿಸಬೇಕು. ಒಂದು ಭಾಷೆಯನ್ನು ಪ್ರೀತಿಸುವುದರೊಂದಿಗೆ ಇನ್ನೊಂದು ಭಾಷೆಯನ್ನು ಕೂಡ ಬಳಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಮಾತನಾಡಿ, ಇದು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ. ಕೊಡಗಿನಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆದಿದೆ. ನಮ್ಮ ಮಕ್ಕಳಿಗೆ ಮಾತೃಭಾಷೆ ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಸುವುದನ್ನು ಹಿರಿಯರು ಮರೆಯಬಾರದು ಎಂದರು.
ಗಡಿನಾಡ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟಕ್ಕೆ ಕಡಂಗ ಗಣಪತಿ ದೇವಸ್ಥಾನದ ಎದುರು ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಪುರುಷರು ಮತ್ತು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಓಟದಲ್ಲಿ ಭಾಗವಹಿಸಿದ್ದರು. ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಪೆಮ್ಮಂಡ ಕೌಶಿ ಕಾವೇರಮ್ಮ ಧ್ವಜಾರೋಹಣ ನೆರವೇರಿಸಿದರು. ಮಂಞಂಡ್ರ ರೇಖಾ ಉಲ್ಲಾಸ್, ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ, ಉತ್ಸವದ ಸಂಚಾಲಕ ವಿನೋದ್ ಮೂಡಗದ್ದೆ, ಚಂದ್ರಾವತಿ ಬಡ್ಡಡ್ಕ, ಅಕಾಡೆಮಿ ಸದಸ್ಯರಾದ ಪಿ.ಎಸ್.ಕಾರ್ಯಪ್ಪ, ಲತಾಪ್ರಸಾದ್ ಕುದ್ಪಾಜೆ, ಅಯ್ಯಪ್ಪ ಯುವಕ ಮಂಡಲದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿವಿಧ ಕ್ರೀಡಾಕೂಟಗಳು ಮತ್ತು ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಚೆಯ್ಯಂಡಾಣೆ ಮುಖ್ಯರಸ್ತೆಯಿಂದ ಶಾಲೆವರೆಗೆ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.