

ಕುಂದಾಪುರ: ವಿದ್ಯೆಯಿಂದ ಏನನ್ನೂ ಸಾಧಿಸಬಹುದು ಎಂದು ಬಾಬಾಸಾಹೇಬರ ಮಾತನ್ನು ನಿಜ ಮಾಡುವ ಸಲುವಾಗಿ ಮಕ್ಕಳ ವಿದ್ಯೆಗೆ ಪಾಲಕರು ಗಮನ ಕೊಡಬೇಕು ಎಂದು ಉಪತಹಸೀಲ್ದಾರ್ ವಿನಯ್ ಹೇಳಿದರು.
ಸೋಮವಾರ ಕುಂದಾಪುರ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಗರ್ಜನೆ) ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ವಕೀಲ ರವಿಕಿರಣ್ ಮುರ್ಡೇಶ್ವರ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಆಳುವ ಪಕ್ಷಗಳ ಮುಲಾಜಿಗೆ ಒಳಗಾಗದಂತಹ ನ್ಯಾಯಾಂಗ, ಚುನಾವಣಾ ಆಯೋಗ ಸಹಿತ ವಿವಿಧ ಸ್ವಾಯತ್ತ ಸಂಸ್ಥೆಗಳ ಸ್ಥಾಪನೆ ಮೂಲಕ ಅಂಬೇಡ್ಕರ್ ಭಾರತದ ನೆಮ್ಮದಿಯ ದಿನಗಳಿಗೆ ಕಾರಣರಾಗಿದ್ದಾರೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಗರ್ಜನೆ) ಸಂಸ್ಥಾಪಕ ಅಧ್ಯಕ್ಷ ಡಾ.ಉದಯ ಕುಮಾರ್ ತಲ್ಲೂರು ಬಾಬಾ ಸಾಹೇಬರ ಬಗ್ಗೆ ಮಾತನಾಡಿದರು. ಕರ್ನಾಟಕ ಭೀಮ ಗರ್ಜನೆ ಅಧ್ಯಯನ ಕೇಂದ್ರ ಹಾಗೂ ತರಬೇತಿ ಸಂಸ್ಥೆ ಉದ್ಘಾಟನೆಯನ್ನು ಉದ್ಯಮಿ ರತ್ನಾಕರ ಶೆಟ್ಟಿ ಪಡುಮುಂಡು ನೆರವೇರಿಸಿದರು.
ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು ಅಧ್ಯಕ್ಷತೆ ವಹಿಸಿದ್ದರು. ಗೌತಮ ತಲ್ಲೂರು ಸಂವಿಧಾನ ಪೀಠಿಕೆ ಓದಿ ಬೋಧಿಸಿದರು.
ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿದರು. ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಜೂನಿಯರ್ ಕಾಲೇಜು ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಉಪಸ್ಥಿತರಿದ್ದರು.
ಇನ್ಸ್ಪೆಕ್ಟರ್ ನಂಜಪ್ಪ ಎನ್.ನಾಯಕ್, ಎಸ್ಐ ನಂಜಾ ನಾಯಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಕುಲಾಲ, ಲಾವಣ್ಯ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸದಸ್ಯರಾದ ಜಿ.ಕೆ.ಗಿರೀಶ್ ದೇವಾಡಿಗ, ಚಂದ್ರಶೇಖರ ಖಾರ್ವಿ, ಸಂಘಟನೆ ರಾಜ್ಯ ಖಜಾಂಚಿ ಡಾ.ದೊಡ್ಡಪ್ಪ ಪೂಜಾರಿ, ರಾಜ್ಯ ನೀಲಿ ಸೈನ್ಯ ಉಪಾಧ್ಯಕ್ಷ ಸದಾಂ ಹುಸೇನ ಯಾದಗಿರಿ, ಮಂಗಳೂರು ಜಿಲ್ಲಾ ಸಂಚಾಲಕ ಸತೀಶ ಮೂಡುಬಿದಿರೆ, ಹೆಮ್ಮಾಡಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಪ್ಪ ಶೆಟ್ಟಿ ಹರ್ಕೂರು, ಪ್ರಗತಿಪರ ಚಿಂತಕ ಅಶೋಕ ದೇವಾಡಿಗ ಹಟ್ಟಿಯಂಗಡಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಯು.ನಾರಾಯಣ, ರಾಘು ಶಿರೂರು, ಶಶಿಧರ ಬಳ್ಕೂರು, ವಿಠಲ ಸಾಲಿಕೇರಿ ಮೊದಲಾದವರು ಉಪಸ್ಥಿತರಿದ್ದರು. ಸುಮಲತಾ ಬಜಗೋಳಿ ಕಾರ್ಯಕ್ರಮ ನಿರ್ವಹಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ.(ರಾಜಕೀಯ ಕ್ಷೇತ್ರ), ಕುಂದಾಪುರ ತಾಲೂಕು ಸಂಚಾಲಕ ಮಂಜುನಾಥ ಜಿ. (ಸಾಮಾಜಿಕ ಕ್ಷೇತ್ರ), ಬ್ರಹ್ಮಾವರ ತಾಲೂಕು ಸಂಚಾಲಕ ಕೃಷ್ಣ ಅಲ್ತೂರು (ಸಾಮಾಜಿಕ ಕ್ಷೇತ್ರ), ಎಸ್. ಸತೀಶ ಕುಮಾರ್ ಕೋಟೇಶ್ವರ(ಮಾಧ್ಯಮ), ಕುಂದಾಪುರ ಪುರಸಭೆ ಪೌರ ಕಾರ್ಮಿಕ ಯೋಗೀಶ್ ಕೆ.(ವಾಹನ ಚಾಲಕ) ಜಿಲ್ಲಾಮಟ್ಟದ ಭೀಮರತ್ನ ಪ್ರಶಸ್ತಿ ನೀಡಲಾಯಿತು.