

ಅಥಣಿ ಗ್ರಾಮೀಣ: ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಪಾಲಕರು ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಉನ್ನತೀಕರಿಸಿದ ನೂತನ ಆರ್‌ಎಂಎಸ್‌ಎ ಪ್ರೌಢಶಾಲೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಅಥಣಿಗೆ ೯ ಸೇರಿ ಒಟ್ಟು ೧೪೦ ನೂತನ ಪ್ರೌಢಶಾಲೆ ನೀಡಿದೆ. ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುಖ್ಯರಸ್ತೆಯ ಒಳಪ್ರದೇಶದಲ್ಲಿರುವ ಗ್ರಾಮಗಳಲ್ಲಿ ಶಾಲೆ ಪ್ರಾರಂಭಿಸಲಾಗುತ್ತಿದೆ. ಅಥಣಿ ತಾಲೂಕಿನ ಜನರ ಅನುಕೂಲಕ್ಕಾಗಿ ಶಿಕ್ಷಣ, ನೀರಾವರಿ, ವಿದ್ಯುತ್, ಕೃಷಿ ಸೇರಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಕೃಷಿ ಶಿಕ್ಷಣಕ್ಕಾಗಿ ೫೦೦ ಕೋಟಿ ರೂ. ವೆಚ್ಚದಲ್ಲಿ ಕೃಷಿ ಮಹಾವಿದ್ಯಾಲಯ ನಿರ್ಮಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯ ಜತೆಗೆ ಕಾರ್ಮಿಕರ ಮಕ್ಕಳಿಗಾಗಿ ವಸತಿಶಾಲೆ ತರಲಾಗುವುದು. ಮಕ್ಕಳ ಭವಿಷ್ಯ ಬೆಳಗಲು ಬೇಕಾದ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಅರ್ದಾವುರ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರು ಗ್ರಾಮಕ್ಕೆ ಪ್ರೌಢಶಾಲೆ ಒದಗಿಸುವ ಮೂಲಕ ಪ್ರೌಢಶಿಕ್ಷಣಕ್ಕಾಗಿ ಅಲೆದಾಡುವುದನ್ನು ತಪ್ಪಿಸಿದ್ದಾರೆ ಎಂದರು.
ಬಸವರಾಜೇಂದ್ರ ಶರಣರು, ಅನಿಲ ಚವ್ಹಾಣ, ಬಸವರಾಜ ಕಂಕಣವಾಡಿ, ಮಲ್ಲಪ್ಪ ಕಾಶೀದ, ಮಾಯಪ್ಪ ಅಜ್ಜಣಗಿ, ದಾನಪ್ಪ ಮಲಾಬಾದ, ಬಿಇಒ ಮಲ್ಲಪ್ಪ ಮುಂಜೆ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಕವಿತಾ ಅರ್ದಾಪುರ, ರೇಖಾ ಅಜ್ಜಣಗಿ, ಸುಜಾತಾ ಮಾದಪ್ಪಗೋಳ, ಎಸ್.ವೈ.ಗಸ್ತಿ, ಗೌಡಪ್ಪ ಖೋತ, ವಿಜಯ ಕನಾಳ, ಮುಖ್ಯ ಶಿಕ್ಷಕ ಅನಂತ ದೇಶಪಾಂಡೆ, ಸಾಬು ಮಾಳಿ ಇತರರಿದ್ದರು.
ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಮಕ್ಕಳು ಕೇಳಿದ್ದನ್ನೆಲ್ಲ ಪಾಲಕರು ಕೊಡಿಸುವ ಮೊದಲು ಅದರ ಅವಶ್ಯಕತೆ ಕುರಿತು ಮನಗಾಣಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. | ವೀರೇಶ್ವರ ದೇವರು ಹಿರೇಮಠ, ತೆಲಸಂಗ