ಮಕ್ಕಳ ಆನ್ಲೈನ್ ಗೇಮ್ ಬಗ್ಗೆ ಪಾಲಕರ ನಿಗಾ ಇರಲಿ

ಮಕ್ಕಳ ಆನ್ಲೈನ್ ಗೇಮ್ ಬಗ್ಗೆ ಪಾಲಕರ ನಿಗಾ ಇರಲಿ
Published on

ಚನ್ನರಾಯಪಟ್ಟಣ: ಪಾಲಕರು ಜಾಗ್ರತೆ ವಹಿಸದಿದ್ದಲ್ಲಿ ಆನ್ಲೈನ್ ಗೇಮ್‌ನಂತಹ ಮಾರಕ ಆಟಗಳು ಮಕ್ಕಳಲ್ಲಿ ವ್ಯಸನವಾಗಿ ಪರಿಣಮಿಸುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ 2024-2025ನೇ ಸಾಲಿನ ಶಾಲಾ ಸಂವತ್ಸರೋತ್ಸವ, ವಿಜ್ಞಾನ ಪ್ರಯೋಗಾಲಯ ಹಾಗೂ ಸವಿ ಸ್ಮತಿ ಆಲಯ ಉದ್ಘಾಟನೆ ಹಾಗೂ ನೆನಪುಗಳ ದೃಶ್ಯಯಾನ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆನ್ಲೈನ್ ಗೇಮ್ ವ್ಯಸನಕ್ಕೆ ಸಿಲುಕಿದ ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಈ ವ್ಯಸನದಿಂದ ಹೊರಬರಲಾಗದೆ ಸಾವಿಗೆ ಶರಣಾಗುತ್ತಿದ್ದಾರೆ. ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಮಕ್ಕಳ ಮನಸ್ಸನ್ನು ಕದಡುತ್ತಿವೆ. ಮಕ್ಕಳು ತಮ್ಮ ಕಲ್ಪನೆಯನ್ನು ಗೇಮ್ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ, ಪಾಲಕರು ಮಕ್ಕಳಿಗೆ ಪ್ರೀತಿಯಿಂದ ಬುದ್ಧಿಹೇಳಿ ಅವರ ಕೈಗೆ ಮೊಬೈಲ್ ಕೊಡದೆ ಮಕ್ಕಳ ಜತೆ ಸಮಯ ಕಳೆಯುವುದನ್ನು ರೂಡಿಸಿಕೊಳ್ಳಬೇಕು ಎಂದರು.

ದಾನಗಳಲ್ಲಿ ವಿದ್ಯದಾನ ಶ್ರೇಷ್ಠವಾಗಿದೆ 58 ವಸಂತಗಳನ್ನು ಪೂರೈಸಿರುವ ಪೇಟೆ ಸರ್ಕಾರಿ ಪ್ರೌಢಶಾಲೆಗೆ ಗುಣಮಟ್ಟದ ಶಿಕ್ಷಣ ಹಾಗೂ ಶಾಲಾ ಅಭಿವೃದ್ಧಿಗೆ ಸುಮಾರು 25 ವರ್ಷಗಳಿಂದಲೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿ ಸರ್ಕಾರಿ ಶಾಲೆ ಮಕ್ಕಳು ಯಾವುದೇ ಸೌಲಭ್ಯದಿಂದ ವಂಚಿತರಾಗಬಾರದೆಂದು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಅರ್ಹತೆ ಆಧಾರದ ಮೇಲೆ ತೆರ್ಗಡೆ ಹೊಂದಿದ ಗುಣಮಟ್ಟದ ಶಿಕ್ಷಕರಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನ ಸೇರಿದಂತೆ ಪುಸ್ತಕ, ಸಮವಸ್ತ್ರ ಶೂ ಎಲ್ಲವನ್ನು ಉಚಿತವಾಗಿ ನೀಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕೆಂದರು.

ಎನ್‌ಎಎಂಎಂಎಸ್‌ನಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್.ನಾಗಪ್ಪ ಮಾತನಾಡಿದರು.

ಪುರಸಭಾ ಅಧ್ಯಕ್ಷೆ ಕೆ.ಎನ್.ಬನಶಂಕರಿ ರಘು, ಉಪಾಧ್ಯಕ್ಷೆ ರಾಣೆಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಬಿಆರ್‌ಸಿ ಕೆ.ಎನ್.ಅನಿಲ್, ರಾಜ್ಯ ಸಹ ಶಿಕ್ಷಕ ಸಂಘದ ಸಹಕಾರ್ಯದರ್ಶಿ ದೇವರಾಜೇಗೌಡ, ಪೇಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net