

ಕೆ.ಆರ್.ನಗರ: ಪಾಲಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪುತ್ತಿದ್ದು, ಇದನ್ನು ತಪ್ಪಿಸಲು ಎಲ್ಲರೂ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಪುರಸಭೆ ಅಧ್ಯಕ್ಷ ಶಿವುನಾಯಕ್ ಮನವಿ ಮಾಡಿದರು.
ಪಟ್ಟಣದ ಆಂಜನೇಯ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಬಳಿಕ ನಡೆದ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಓದಿದ ಶಾಲೆಗೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ದಶಕಗಳ ಹಿಂದೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು ಇದರೊಂದಿಗೆ ವಿದೇಶಗಳಿಗೂ ಹೋಗಿ ತಮ್ಮ ಸಾಮರ್ಥ್ಯ ತೋರಿದ್ದಾರೆ. ಇದನ್ನು ಅರಿತು ಎಲ್ಲರೂ ಸರ್ಕಾರಿ ಶಾಲೆಗಳ ಉಳಿವಿಗೆ ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟದ ಏಳಿಗೆಗಾಗಿ ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಸಹ ಪೋಷಕರು ಆಂಗ್ಲ ಭಾಷಾ ವ್ಯಾಮೋಹದಿಂದ ಖಾಸಗಿ ಶಾಲೆಗಳತ್ತ ಒಲವು ತೋರಿಸುತ್ತಿರುವುದು ವಿಷಾದದ ಸಂಗತಿ. ಭವಿಷ್ಯದಲ್ಲಿ ಸಮುದಾಯದ ಪ್ರತಿನಿಧಿಗಳು ಸರ್ಕಾರಿ ಶಾಲೆಗಳತ್ತ ಒಲವು ತೋರಬೇಕಿದೆ ಎಂದು ಮನವಿ ಮಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿವೆ. ಈ ಹಿನ್ನೆಲೆಯಲ್ಲಿ ಪಾಲಕರು ಇದನ್ನರಿತು ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ವಸಂತಮ್ಮ, ಪುರಸಭಾ ಮಾಜಿ ಅಧ್ಯಕ್ಷ ನರಸಿಂಹರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಶಾಲಾ ಭೂ ದಾನಿಗಳಾದ ಹೇಮಾವತಿ, ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿದರು.
ವೇದಿಕೆಯಲ್ಲಿ ಶಾಲೆಯ ಏಳಿಗೆಗೆ ಅವಿರತವಾಗಿ ಸಹಕಾರ ನೀಡುತ್ತಿರುವ ದಾನಿಗಳಾದ ಮೆಗ್ನಟಾಸ್ ಸೆಕ್ಯುರಿಟಿ ಏಜೆನ್ಸಿಯ ಕೆ.ಎ.ಮಹೇಶ್, ಲಕ್ಷ್ಮಿಕಾಂತ್, ದಯಾನಂದ, ರವಿಕುಮಾರ್, ಅಶೋಕ್‌ಕುಮಾರ್, ಲಕ್ಷ್ಮಿನಾರಾಯಣ್, ಕರ್ನಾಟಕ ತಮಿಳು ಭಾಷಿಕರ ಸಂಘದ ತಾಲೂಕು ಅಧ್ಯಕ್ಷ ಶಿಲ್ಪಾ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಸ್ವಾಮಿಗೌಡ, ಸಿಆರ್‌ಪಿ ಉದಯಕುಮಾರ್, ಶಾಲಾ ಮುಖ್ಯಶಿಕ್ಷಕಿ ಬೇಬಿ, ಶಿಕ್ಷಕರಾದ ನಾಗರತ್ನ, ರಂಗಪ್ಪ, ವಿನುತ, ಸೌಮ್ಯಾ.ಕವಿತಾ ಇತರರಿದ್ದರು.