

ಹುಣಸೂರು: ಪಾಲಕರು ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ಮೂಲಕ ತಮ್ಮ ಮಕ್ಕಳ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್ ತಿಳಿಸಿದರು.
ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ವೇಣುಗೋಪಾಲ ವಿದ್ಯಾಸಂಸ್ಥೆ(ಅನುದಾನಿತ)ಯಲ್ಲಿ ಬುಧವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಪಾಲಕರು ತಮ್ಮ ಮಕ್ಕಳ ಹೆಚ್ಚು ಅಂಕಗಳನ್ನು ಗಳಿಸಬೇಕು ಎನ್ನುವ ಆಸೆ ಇಟ್ಟುಕೊಳ್ಳುತ್ತಾರೆ. ಅತಿ ಹೆಚ್ಚು ಅಂಕ ಪಡೆಯುವುದಕ್ಕಿಂತ ಸಮಾಜದಲ್ಲಿ ಮಕ್ಕಳು ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಲಿ ಎಂಬ ಬಯಕೆ ಹೊಂದಬೇಕು. ಮಕ್ಕಳಿಗೆ ಜೀವನ ಪಾಠ, ಜೀವನದ ಕೌಶಲ ಕಲಿಸಿಕೊಡಬೇಕು. ಮನೆಯಲ್ಲಿ ಕಲಿಕೆಗೆ ಅನುಕೂಲವಾಗುವ ವಾತಾವರಣ ನಿರ್ಮಿಸಬೇಕು. ಜ್ಞಾನ ಸಂಪಾದನೆಗಾಗಿ ಗ್ರಂಥಾಲಯಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ಮಕ್ಕಳಿಗೆ ಬೆಳೆಸಬೇಕು. ಶೈಕ್ಷಣಿಕ ಪ್ರಗತಿ ಜತೆಗೆ ಕ್ರೀಡೆ ಮನೋಭಾವನ್ನೂ ಬೆಳೆಸಬೇಕು ಎಂದು ಸಲಹೆ ನೀಡಿದರು.
ಹರವೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಮಶೆಟ್ಟಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ವಿಶ್ವೇಶ್ವರಯ್ಯ, ಉಪಾಧ್ಯಕ್ಷ ಎಚ್.ಆರ್. ಜಗದೀಶ್, ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ ಚಂದ್ರಶೇಖರಯ್ಯ, ಶಿವರಾಜ್ ಇದ್ದರು. ಶಾಲಾ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.