

ಮೈಸೂರು: ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡುವವರಿಗೆ ಸರ್ಕಾರಿ ಉದ್ಯೋಗದಲ್ಲಿಯೂ ಮೀಸಲು ಇರುವುದರಿಂದ ಪಾಲಕರು ಮಕ್ಕಳ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ಪತ್ರಕರ್ತಅಂಶಿ ಪ್ರಸನ್ನಕುಮಾರ್ ಹೇಳಿದರು.
ನಗರದ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಭಾನುವಾರ 4 ವರ್ಷದಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಸಿಲಿಕಾಥನ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ವಿಜೇತರಾದವರಿಗೆ ಸರ್ಕಾರದಲ್ಲಿ ಉದ್ಯೋಗಗಳು ಹೇರಳವಾಗಿ ಸಿಗುತ್ತೀವೆ. ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಇದಕ್ಕೆ ಪಾಲಕರು ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಕೂಡಾ ಕ್ರೀಡಾ ಚಟುವಟಿಕೆಯ ಜತೆಗೆ ಓದಿಗೂ ಗಮನಕೊಡಬೇಕು. ಕ್ರೀಡಾಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳನ್ನೂ ಕ್ರೀಡಾ ಚಟುವಟಿಕೆ ಜತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜಗೌಡ ಮಾತನಾಡಿ, ಕ್ರೀಡೆಗಳು ಜೀವನದಲ್ಲಿ ಶಿಸ್ತು ತರಲಿವೆ. ಜತೆಗೆ ಸಮರ್ಪಣೆ ಮತ್ತು ತಾಳ್ಮೆಯ ಮೌಲ್ಯಗಳನ್ನು ಕಲಿಸುತ್ತದೆ. ಸೋಲನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕ್ರೀಡೆಗಳು ಜನರಿಗೆ ಕಲಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರೀಡೆಯು ವ್ಯಕ್ತಿಗಳ ಆಲೋಚನಾ ಸಾಮರ್ಥ್ಯವನ್ನು ಸುಧಾರಿಸುತ್ತವೆ ಎಂದು ಹೇಳಿದರು.
ಕ್ರೀಡೆಗಳು ಮನಸ್ಸನ್ನು ಚುರುಕುಗೊಳಿಸುತ್ತವೆ. ಇದರಲ್ಲಿ ಭಾಗವಹಿಸುವ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳಿಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ದೇಸಿ ಆಟಗಳಾದ ಕಬಡ್ಡಿ, ಖೋ ಖೋ, ಹಾಕಿ ಮುಂತಾದ ಕ್ರೀಡೆಗಳು ಪ್ರಸಿದ್ಧಿ ಪಡೆದಿದ್ದು, ತಮ್ಮಿಚ್ಚೆಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೋಬಳಿ ಮಟ್ಟದಿಂದ ರಾಜ್ಯದವರಿಗೆ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಆಸಕ್ತಿಯಿರುವ ಕ್ರೀಡಾ ಚಟುವಟಿಕೆಯನ್ನು ಗುರುತಿಸಿ ಅವರ ವಿದ್ಯಾಭಾಸದ ಜತೆಗೆ ಕ್ರೀಡಾ ತರಬೇತಿ ಪಡೆಯಲು ಯೋಜನೆ ರೂಪಿಸಿದ್ದಾರೆ. ಹೀಗೆ ತರಬೇತಿ ಪಡೆದವರು ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಕ್ರೀಡೆಗಳು ಸಾಮಾಜಿಕ ಕೌಶಲ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ವಿವಿಧತೆಯಲ್ಲಿ ಏಕತೆ ಮತ್ತು ರಾಷ್ಟ್ರೀಯತೆಯನ್ನು ಪಡೆಯಲು ಸಹಾಯ ಮಾಡುತ್ತವೆ. ಕೇಂದ್ರ ಸರ್ಕಾರ 2036ರಲ್ಲಿ ನಡೆಯುವ ಒಲಂಪಿಕ್ಸ್ ಆಯೋಜಿಸಲು ಮುಂದಿನ ವರ್ಷ ನಡೆಯಲಿರುವ ಬಿಡ್‌ನಲ್ಲಿ ಭಾಗವಹಿಸುತ್ತಿದೆ. ಭಾರತದಲ್ಲಿ ಒಲಂಪಿಕ್ಸ್ ಆಯೋಜನೆಗೊಂಡರೆ ದೇಶದ ಆರ್ಥಿಕತೆ ಮತ್ತು ವಿಶ್ವದಲ್ಲಿ ಹೆಸರು ಪ್ರಸಿದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎಲ್.ರವಿ ಮಾತನಾಡಿ, ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಕಳೆದ 19 ವರ್ಷಗಳಿಂದ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, 2500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಜು, ಟೆನ್ನಿಸ್, ಟೇಬಲ್ ಟೆನ್ನಿಸ್, ವಾಲಿಬಾಲ್, ಥ್ರೋಬಾಲ್, ಚೆಸ್, ಕರಾಟೆ ಸ್ಪರ್ಧೆಗಳಲ್ಲಿ ರಾಷ್ಟೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನೂ ಗೆದ್ದಿದ್ದಾರೆ ಎಂದು ಹೇಳಿದರು.
ಕ್ರೀಡೆ ಪ್ರೋತ್ಸಾಹಿಸಲು ಸಂಸ್ಥೆಯಿಂದ ಉಚಿತ ಶಿಕ್ಷಣವನ್ನೂ ನೀಡುತ್ತೀದ್ದೇವೆ. ಅದೇ ರೀತಿ ಶಿಕ್ಷಣದ ಜತೆಗೆ ಸಂಗೀತ, ಯೋಗ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಲೆಯ ಪ್ರಾಂಶುಪಾಲೆ ಡಾ.ದೀಪ್ತಿ ಚರ್ತುವೇದಿ, ರೋಟರಿ ಸಂಸ್ಥೆಯ ಎಂ.ಮೋಹನ್, ಕೆ.ಎನ್.ಸಂತೋಷ್ ಇತರರು ಇದ್ದರು. ನಗರದ ವಿವಿಧ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.