

ಸುಂಟಿಕೊಪ್ಪ : ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಗುರಿ, ಏಕಾಗ್ರತೆ ಸಾಧಿಸುವ ಛಲ, ವಿದ್ಯಾರ್ಜನೆಯಲ್ಲಿ ಪರಿಶ್ರಮ ಮುಖ್ಯವಾಗಿದೆ. ಪಾಲಕರು ಮಕ್ಕಳ ವಿದ್ಯಾರ್ಜನೆಗೆ ಒತ್ತು ನೀಡಬೇಕು ಎಂದು ದಾನಿಗಳೂ ಆದ ಬೆಂಗಳೂರಿನ ಪುರವಂಕರ ಲಿ. ಕಾರ್ಯನಿರ್ವಾಹಕ ಉಪಾಧ್ಯಕ್ಷ ಹರಪಳ್ಳಿ ರವೀಂದ್ರ ಕರೆ ನೀಡಿದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿ ಶಾಲೆಯ 59ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿನ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. ಶಾಲಾ ಮಕ್ಕಳು ಚಲನಚಿತ್ರ ನಟ, ನಟಿಯರನ್ನು ವೈಭವೀಕರಿಸುವ ಮನೋಭಾವ ತ್ಯಜಿಸಬೇಕು. ಸಮಾಜ ಪರಿವರ್ತಕರಾದ ಸ್ವಾಮಿ ವಿವೇಕಾನಂದ, ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರಭೋಸ್, ಎಪಿಜೆ ಅಬ್ದುಲ್ ಕಲಾಂ ಅವರನ್ನು ಆದರ್ಶವಾಗಿ ತೆಗೆದುಕೊಂಡರೆ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎಂದರು.
ಅಭಿವೃದ್ಧಿ ಪಥದತ್ತ ಸಾಗಿದ ರಷ್ಯಾ, ಚೀನಾ, ಜಪಾನ್ ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿದ ನಾಯಕರುಗಳಿಗೆ ಇಂಗ್ಲಿಷ್ ಬರದಿದ್ದರೂ ಅವರು ದೇಶವನ್ನು ಅಭಿವೃದ್ಧಿ ಮುಂಚೂಣಿಗೆ ತಂದರು. ಭಾಷೆಯಾಗಿ ಇಂಗ್ಲಿಷ್‌ನ್ನು ಕಲಿಯಿರಿ. ಆದರೆ ಕನ್ನಡ ಭಾಷೆ ಜ್ಞಾನ, ಸಂಸ್ಕೃತಿ ಕಲಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಫಿ ಬೆಳೆಗಾರರೂ ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್, ಈ ಶಾಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರೆದರೆ ತೇರ್ಗೆಡೆಯಾಗುವುದಿಲ್ಲ ಎಂಬ ತಪ್ಪು ಭಾವನೆ ಸರಿಯಲ್ಲ. ಸತತ ಪರಿಶ್ರಮ ಶ್ರದ್ಧೆಯಿಂದ ಮಕ್ಕಳು ಜೀವನದಲ್ಲಿ ಸಾಧಿಸಬಹುದು. 2025ರ ಸಾಲಿಗೆ ಈ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳು ಮೊಬೈಲ್‌ನಿಂದ ದೂರವಿರಬೇಕು, ಇಲ್ಲದಿದ್ದರೆ ವಿದ್ಯಾರ್ಜನೆಗೆ ಅಡ್ಡಿಯಾಗಲಿದೆ. ಈ ಬಗ್ಗೆ ಪಾಲಕರು ಸದಾ ನಿಗಾ ವಹಿಸಬೇಕು ಎಂದು ಅವರು ಹೇಳಿದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ಶಾಲಾ ಕಟ್ಟಡ ಅಭಿವೃದ್ಧಿಗೆ 58 ಲಕ್ಷ ರೂ. ಬೇಕಾಗಿದ್ದು, ಸರ್ಕಾರದಿಂದ ಅನುದಾನ ಲಭಿಸುತ್ತಿಲ್ಲ. 25 ಕ್ಕಿಂತ ಕಡಿಮೆ ಸಂಖ್ಯೆ ಮಕ್ಕಳು ಇರುವ ಅನುದಾನಿತ ಪ್ರೌಢಶಾಲೆಯನ್ನು ಮುಚ್ಚಿಸಲು ಸರ್ಕಾರ ಆದೇಶ ನೀಡಿದೆ. ಸರ್ಕಾರದಿಂದ ಅನುದಾನ ಒದಗಿಸಲು ಮುಂದಾಗಬೇಕು. 60 ವರ್ಷದಿಂದ ನಡೆಸಿಕೊಂಡ ಶಾಲೆ ಅಭಿವೃದ್ಧಿಗೆ ದಾನಿಗಳು ಸಹಕಾರ ಒದಗಿಸಬೇಕೆಂದರು.
ಉದ್ಯಮಿ ಹಾಗೂ ಹಳೆಯ ವಿದ್ಯಾರ್ಥಿ ಅಜರಂಗಳ ಎಸ್. ರಾಮಣ್ಣ ಮಾತನಾಡಿ, ಶಾಲಾ ಮಕ್ಕಳಿಗೆ ಕ್ರೀಡಾಕೂಟಕ್ಕೆ ಬೇಕಾದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಸ್.ಬಿ.ಶಂಕರ್ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಕೊಲಿಂಗನ ಎಚ್.ಕೀರ್ತನ್, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಡುವಂಡ ಎಸ್. ಚಂಗಪ್ಪ, ಬಿಬಿಎಂಪಿ ಹಿರಿಯ ಆರೋಗ್ಯ ಪರಿವೀಕ್ಷಕ ಕೆ.ಬಿ.ಸಂಧ್ಯಾ, ಸಂಸ್ಥೆಯ ಉಪಾಧ್ಯಕ್ಷ ಕುಟ್ಟಪ್ಪ, ಸದಸ್ಯರಾದ ಲಕ್ಷ್ಮೀ ನಾರಾಯಣ, ನಿರ್ದೇಶಕ ಸುರೇಶ್ ಚಂಗಪ್ಪ, ತಾ.ಪಂ. ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ಪೆಲಿಕ್ಸ್ ಪಿಂಟೋ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಶಾಲಾ ಮಕ್ಕಳು ಗೌರವ ವಂದನೆಯನ್ನು ಅತಿಥಿಗಳಿಗೆ ನೀಡಿದರು. ಶಾಲೆಯ ಮುಖ್ಯಶಿಕ್ಷಕಿ ಕೆ.ಎಸ್.ಇಂದಿರಾ ವರದಿ ವಾಚಿಸಿದರು.